ಮನೆ ಬಳಕೆಯ ಎಲ್‌ಪಿಜಿ ಸಿಲಿಂಡರ್ ದರ 200 ರೂಪಾಯಿ ಇಳಿಕೆ; ಉಜ್ವಲಾ ಯೋಜನೆ ಫಲಾನುಭವಿಗಳಿಗೆ 400 ರೂಪಾಯಿ ಪ್ರಯೋಜನ
Tuesday, August 29, 2023
ಮನೆ ಬಳಕೆಯ ಎಲ್‌ಪಿಜಿಯ ಪ್ರತಿ ಸಿಲಿಂಡರ್ ದರವನ್ನು 200 ರೂಪಾಯಿ ಕಡಿಮೆ ಮಾಡುವ ಪ್ರಸ್ತಾವನೆಯನ್ನು ಕೇಂದ್ರ ಸಚಿವ ಸಂಪುಟ ಅನುಮೋದಿಸಿದೆ. ಈ ದರ ಇಳಿಕೆ ಉಜ್ವಲಾ ಯೋಜನೆ ಫಲಾನುಭವಿಗಳು ಸೇರಿ ಎಲ್ಲರಿಗೂ ಅನ್ವಯವಾಗಲಿದೆ ಎಂದು ಕೇಂದ್ರ ಸಚಿವ ಅನುರಾಗ್ ಸಿಂಗ್ ಠಾಕೂರ್ ತಿಳಿಸಿದ್ದಾರೆ.
ಉಜ್ವಲಾ ಯೋಜನೆಯ ಫಲಾನುಭವಿಗಳಿಗೆ ಮುಂದಿನ ದಿನಗಳಲ್ಲಿ 200 ರೂಪಾಯಿ ಹೆಚ್ಚುವರಿ ಸಬ್ಸಿಡಿ ಸಿಗಲಿದೆ. ಕೇಂದ್ರ ಸರ್ಕಾರದ ಈ ನಿರ್ಧಾರದೊಂದಿಗೆ ಮನೆ ಬಳಕೆಯ 14 ಕಿಲೋ ತೂಕದ ಎಲ್‌ಪಿಜಿ ಸಿಲಿಂಡರ್ ದರ 200 ರೂಪಾಯಿ ಕಡಿಮೆ ಆಗಲಿದೆ. ಉಜ್ವಲಾ ಯೋಜನೆ ಫಲಾನುಭವಿಗಳಿಗೆ ಎಲ್‌ಪಿಜಿ ದರದಲ್ಲಿ 400 ರೂಪಾಯಿ ಕಡಿಮೆಯಾದ ಪ್ರಯೋಜನ ಸಿಗಲಿದೆ.
ಪ್ರಧಾನಿ ನರೇಂದ್ರ ಮೋದಿ ಅವರ ಅಧ್ಯಕ್ಷತೆಯಲ್ಲಿ ನಡೆದ ಸಚಿವ ಸಂಪುಟ ಸಭೆಯಲ್ಲಿ ಈ ಕುರಿತು ತೀರ್ಮಾನ ತೆಗೆದುಕೊಳ್ಳಲಾಗಿದೆ. ಓಣಂ, ರಕ್ಷಾ ಬಂಧನ ನಿಮಿತ್ತ ದೇಶದ ಸಹೋದರಿಯರಿಗೆ, ಮಾತೆಯರಿಗೆ ಪ್ರಧಾನಿ ಮೋದಿಯವರಿಂದ ಒಂದು ಉಡುಗೊರೆ ಇದು ಎಂದು ಸಚಿವ ಅನುರಾಗ್ ಸಿಂಗ್ ಠಾಕೂರ್ ಹೇಳಿದರು.