ಸ್ವರ್ಣ ಗೌರಿ ಹಬ್ಬ: ಪೂಜೆ ಮುಹೂರ್ತ ಯಾವಾಗ ಗೌರಿ ದಾರದ ಮಹತ್ವವೇನು
ಭಾರತದ ಪ್ರಮುಖ ಹಬ್ಬಗಳಾದ ಗೌರಿ-ಗಣೇಶ ಹಬ್ಬಕ್ಕೆ ಇನ್ನೇನು ಕೆಲವೇ ದಿನಗಳಷ್ಟೇ ಬಾಕಿದೆ. ಗಣೇಶ ಹಬ್ಬಕ್ಕಿಂತ ಒಂದು ದಿನ ಮುಂಚಿತವಾಗಿ ಗೌರಿ ಹಬ್ಬವನ್ನು ಆಚರಿಸಲಾಗುವುದು. ಭಾದ್ರಪದ ಮಾಸದ ಶುದ್ಧ ತದಿಗೆ ದಿನ ಗೌರಿ ಪೂಜೆಯನ್ನು ಮಾಡಲಾಗುವುದು.
ಗೌರಿ ದೇವಿ ಪ್ರಕೃತಿಯ ಸ್ವರೂಪ. ಪಾರ್ವತಿ ದೇವಿಯ ಅಪರಾವತಾರ. ಕುಟುಂಬದ ಸಂತೋಷ, ಸಮೃದ್ಧಿ ಹೆಚ್ಚಿಸಲಿ, ನಮಗೆ ಶಕ್ತಿಯನ್ನು ನೀಡಲಿ ಎಂದು ಶ್ರದ್ಧೆ-ಭಕ್ತಿಯಿಂದ ಗೌರಿಯನ್ನು ಪೂಜಿಸಲಾಗುವುದು. ಗೌರಿ ಹಬ್ಬವನ್ನು ಸುವರ್ಣ ಗೌರಿ ಹಬ್ಬವೆಂದು ಕರೆಯಲಾಗುವುದು.
ಈ ವರ್ಷ ಸ್ವರ್ಣ ಗೌರೀ ಹಬ್ಬ ಯಾವಾಗ, ಪೂಜಾ ಮುಹೂರ್ತ, ಪೂಜಾ ವಿಧಿ ಇವುಗಳ ಬಗ್ಗೆ ತಿಳಿಯೋಣ:
ಸ್ವರ್ಣ ಗೌರೀ ಹಬ್ಬ ಯಾವಾಗ
ಗೌರಿ ಹಬ್ಬದ ದಿನಾಂಕ ಸೆಪ್ಟೆಂಬರ್ 18, ಸೋಮವಾರ
ಭಾದ್ರಪದ ಮಾಸದ ಶುಕ್ಲ ಪಕ್ಷದ ತದಿಗೆಯಂದು ಗೌರಿ ಹಬ್ಬವನ್ನು ಆಚರಿಸಲಾಗುವುದು.
ಗೌರಿ ಹಬ್ಬದ ವ್ರತದ ಸಮಯ
ತೃತೀಯಾ ತಿಥಿ ಪ್ರಾರಂಭ: ಸೆಪ್ಟೆಂಬರ್ 17, 11:08 am ಗಂಟೆಗೆ
ತೃತೀಯಾ ತಿಥಿ ಮುಕ್ತಾಯ: ಸೆಪ್ಟೆಂಬರ್ 18, 12:39 pm ಗಂಟೆಯವರೆಗೆ
ಪ್ರಾತಃಕಾಲ ಗೌರೀ ಪೂಜಾ ಮುಹೂರ್ತ
ಬೆಳಗ್ಗೆ 06:09 ರಿಂದ 08:35 ಗಂಟೆಯವರೆಗೆ
ಪೂಜೆಗೆ ಕಾಲಾವಧಿ 2 ಗಂಟೆ 26 ನಿಮಿಷ
ಗೌರೀ ಹಬ್ಬದಲ್ಲಿ 16 ಗಂಟಿನ ದಾರದ ಮಹತ್ವ
ಈ ವ್ರತವನ್ನು ಮುತ್ತೈದೆಯರು 16 ವರ್ಷ ಮಾಡಿದರೆ ತುಂಬಾ ಒಳ್ಳೆಯದು ಎಂದು ಹೇಳಲಾಗುತ್ತದೆ. ಗೌರೀ ದೇವಿ ಶಿವನನ್ನು ಒಲಿಸಿಕೊಳ್ಳಲು ಬರೀ ಹಣ್ಣುಗಳನ್ನು ಮಾತ್ರ ಸೇವಿಸುತ್ತಾ 16 ವರ್ಷ ತಪಸ್ಸು ಮಾಡಿದಳು ಎಂಬ ಪೌರಾಣಿಕ ಕತೆಯಿದೆ. ಗೌರಿಯ ತಪಸ್ಸಿಗೆ ಮೆಚ್ಚಿ ಶಿವ ಪಾರ್ವತಿಯನ್ನು ಮದುವೆಯಾದ. ಹಾಗಾಗಿ, ಗೌರಿ ಹಬ್ಬದಂದು 16 ಗಂಟುಗಳ ಗೌರಿದಾರವನ್ನು ಬಲ ಮಣಿಕಟ್ಟಿಗೆ ಧರಿಸಲಾಗುವುದು. ಇದರಿಂದ ಗೌರಿಯ ಆಶೀರ್ವಾದ ಸಿಗುತ್ತದೆ.
ಗೌರಿ ಹಬ್ಬಕ್ಕೆ ಬಾಗಿನ
ಗೌರಿ ಹಬ್ಬಕ್ಕೆ ಕನಿಷ್ಠ 5 ಬಾಗಿನಗಳನ್ನು ತಯಾರಿಸಲಾಗುವುದು. ಈ ಬಾಗಿನದಲ್ಲಿ ಸಾಮಾನ್ಯವಾಗಿ ಅರಿಶಿಣ-ಕುಂಕುಮ, ಕಪ್ಪು ಬಳೆಗಳು, ಕಪ್ಪು ಮಣಿಗಳು , ಒಂದು ಬಾಚಣಿಗೆ, ಒಂದು ಚಿಕ್ಕ ಕನ್ನಡಿ, ಬಳೆ, ತೆಂಗಿನಕಾಯಿ, ಬ್ಲೌಸ್ ಪೀಸ್, ಧಾನ್ಯ, ಅಕ್ಕಿ, ಹಣ್ಣುಗಳಿರಬೇಕು. ಬಾಗಿನವನ್ನು ಮೊರದಲ್ಲಿ ನೀಡಬೇಕು. ತಯಾರು ಮಾಡಿದ ಬಾಗಿನದಲ್ಲಿ ಒಂದು ಬಾಗಿನವನ್ನು ಗೌರೀ ದೇವಿಗೆ ಇಟ್ಟು ನಂತರ ನಂತರ ಉಳಿದವುಗಳನ್ನು ಹಬ್ಬಕ್ಕೆ ಬಂದ ಮುತ್ತೈದೆಯರಿಗೆ ನೀಡಲಾಗುವುದು.
ಗೌರೀ ವ್ರತ
ಮನೆಯ ಹೆಂಗಸರು, ಹೆಣ್ಣು ಮಕ್ಕಳು ಗೌರಿ ಹಬ್ಬದಂದು ಬೆಳಗ್ಗೆ ಬೇಗ ಎದ್ದು ಸ್ನಾನ ಮಾಡಿ, ಹೊಸ ಬಟ್ಟೆ ಧರಿಸಿ, ಲಕ್ಷ್ಮಿಯಂತೆ ಅಲಂಕರಿಸಿಕೊಂಡು ದೇವಾಲಯಕ್ಕೆ ಹೋಗಿ ಪೂಜೆ ಮಾಡಿ ಬಂದು ನಂತರ ಮನೆಯಲ್ಲಿ ಗೌರಿ ಪೂಜೆಯನ್ನು ಮಾಡುತ್ತಾರೆ. ಈ ದಿನ ಉಪವಾಸವಿದ್ದು ಗೌರಿ ವ್ರತವನ್ನು ಆಚರಿಸಲಾಗುವುದು.
ಸ್ವರ್ಣ ಗೌರಿ ವ್ರತವನ್ನು ಮಾಡುವವರಿಗೆ ಗೌರಿಯು ಸಕಲ ಸೌಭಾಗ್ಯ ನೀಡಿ ಸಲಹುತ್ತಾಳೆ ಎಂಬುವುದು ಅವಳ ಭಕ್ತರ ಅಚಲ ನಂಬಿಕೆ.
(ಕೃಪೆ - ಆಧ್ಯಾತ್ಮಿಕ ವಿಚಾರ ಕಮ್ಯೂನಿಟಿ)