2027ರ ಒಳಗೆ ಪುತ್ತೂರಿನಲ್ಲಿ ಅಂತಾರಾಷ್ಟ್ರೀಯ ಕ್ರಿಕೆಟ್ ಸ್ಟೇಡಿಯಂ ನಿರ್ಮಾಣ

CITIZEN NEWS PUTTUR
By -
0


International cricket Stadium Puttur documents handed over to KSCA
2027ರ ಒಳಗೆ ಪುತ್ತೂರಿನಲ್ಲಿ ಅಂತಾರಾಷ್ಟ್ರೀಯ ಕ್ರಿಕೆಟ್ ಸ್ಟೇಡಿಯಂ ನಿರ್ಮಾಣದ ದಾಖಲೆ ಹಸ್ತಾಂತರ

ಪುತ್ತೂರು ತಾಲೂಕು ಕಬಕ ಗ್ರಾಮದ ಪೆರಿಯತ್ತೋಡಿ ಎಂಬಲ್ಲಿ ಅಂತಾರಾಷ್ಟ್ರೀಯ ಕ್ರಿಕೆಟ್ ಮೈದಾನ ನಿರ್ಮಾಣಕ್ಕೆ ಸಂಬಂಧಿಸಿದ ಜಾಗದ ದಾಖಲೆ ಮತ್ತು ಷರತ್ತು ಪತ್ರಗಳನ್ನು ಕರ್ನಾಟಕ ರಾಜ್ಯ ಕ್ರಿಕೆಟ್ ಸಂಸ್ಥೆಗೆ ಹಸ್ತಾಂತರಿಸಲಾಗಿದೆ. ಪುತ್ತೂರಿನ ಉಪವಿಭಾಗಾಧಿಕಾರಿ ನ್ಯಾಯಾಲಯ ಸಭಾಂಗಣದಲ್ಲಿ ಈ ಕಾರ್ಯಕ್ರಮ ಮಂಗಳವಾರ (ಜ.30) ನಡೆಯಿತು.

ಪುತ್ತೂರು ಕಬಕ ಗ್ರಾಮದ ಪೆರಿಯತ್ತೋಡಿ ಎಂಬಲ್ಲಿ 23.25 ಎಕರೆ ಪ್ರದೇಶವನ್ನು ಅಂತಾರಾಷ್ಟ್ರೀಯ ಕ್ರಿಕೆಟ್‌ ಕ್ರೀಡಾಂಗಣಕ್ಕಾಗಿ ಮೀಸಲಿಡಲಾಗಿದೆ. ಮೂರು ವರ್ಷದ ಒಳಗೆ 25 ಕೋಟಿ ರೂಪಾಯಿ ವೆಚ್ಚದಲ್ಲಿ ಅಂತಾರಾಷ್ಟ್ರೀಯ ಕ್ರಿಕೆಟ್ ಸ್ಟೇಡಿಯಂ ಅನ್ನು ಬೆಂಗಳೂರಿನ ಕೆಎಸ್‌ಸಿಎ ನಿರ್ಮಿಸಿಕೊಡಲಿದೆ.

ಸ್ಟೇಡಿಯಂನಲ್ಲಿ ಹಿಂದೆ ಕೇವಲ ಒಂದು ಕ್ರಿಕೆಟ್ ಕ್ರೀಡಾಂಗಣದ ಪ್ರಸ್ತಾವನೆ ಇತ್ತು. ಇದನ್ನು ಪರಿಷ್ಕರಿಸಿದ್ದು ಈಗ ಎರಡು ಷರತ್ತುಗಳೊಂದಿಗೆ ಎರಡು ಕ್ರಿಕೆಟ್ ಕ್ರೀಡಾಂಗಣ ನಿರ್ಮಾಣವಾಗಲಿದೆ. ಒಂದು ಅಂತಾರಾಷ್ಟ್ರೀಯ ಕ್ರಿಕೆಟ್ ಪಂದ್ಯಗಳಿಗೆ ಮೀಸಲಾದರೆ, ಇನ್ನೊಂದು ಸ್ಥಳೀಯ ಮಕ್ಕಳು ಮತ್ತು ಸಾರ್ವಜನಿಕರು ಕ್ರಿಕೆಟ್ ಆಡುವುದಕ್ಕೆ ಬಳಸಲು ನಿರ್ಮಾಣ ಮಾಡಲಾಗುತ್ತದೆ. ಸ್ಥಳೀಯರು ಬಳಸುವ ಕ್ರಿಕೆಟ್ ಮೈದಾನವೂ ಓವರ್ ಆರ್ಮ್‌ ಕ್ರಿಕೆಟ್‌ಗೆ ಬಳಕೆಯಾಗಲಿದೆ.

ದಕ್ಷಿಣ ಕನ್ನಡ ಜಿಲ್ಲಾಧಿಕಾರಿ, ಪುತ್ತೂರು ಉಪವಿಭಾಗಾಧಿಕಾರಿ, ಕಂದಾಯ ಇಲಾಖೆ ಈಗಾಗಲೇ ಸರ್ವೇ ನಡೆಸಿದ್ದು, ಜಾಗದ ಹಸ್ತಾಂತರ ಮಾಡಲಾಗುತ್ತಿದೆ. ಈ ಪಸ್ತಾವನೆ ಸರ್ಕಾರದ ಹಂತದಲ್ಲಿ ಬಾಕಿ ಇತ್ತು. ಈಗ ಅದಕ್ಕೆ ಚಾಲನೆ ಸಿಕ್ಕಿದ್ದು, 30 ವರ್ಷದ ಅವಧಿಗೆ ಲೀಸ್ ಆಧಾರದಲ್ಲಿ ಆ ಜಾಗವನ್ನು ಕೆಎಸ್‌ಸಿಎಗೆ ಹಸ್ತಾಂತರಿಸಲಾಗುತ್ತಿದೆ ಎಂದು ಶಾಸಕ ಅಶೋಕ್ ಕುಮಾರ್ ರೈ ಇದೇ ಸಂದರ್ಭದಲ್ಲಿ ಹೇಳಿದರು.

ಕೆಎಸ್‌ಸಿಎ ಅಧ್ಯಕ್ಷ ರಘುಪತಿ ಭಟ್ ಮಾತನಾಡಿದ, ದಯಾನಂದ ಪೈ, ಬ್ರಿಜೇಶ್ ಪಟೇಲ್ ಕೂಡ ಇಲ್ಲಿ ಕ್ರಿಕೆಟ್ ಕ್ರೀಡಾಂಗಣ ನಿರ್ಮಿಸಲು ಪ್ರಯತ್ನಿಸಿದ್ದರು. ಯೂನಿಯನ್‌ ಕ್ರಿಕೆಟರ್ಸ್‌, ಜಿಲ್ಲಾಧಿಕಾರಿಯಾಗಿದ್ದ ರಾಜೇಂದ್ರ ಕುಮಾರ್, ಉಪವಿಭಾಗಾಧಿಕಾರಿಗಳು, ಶಾಸಕರ ಸಹಕಾರದಿಂದ ಈ ಕನಸು ಈಗ ನನಸಾಗುವ ಹಂತಕ್ಕೆ ಬಂದಿದೆ. ಕೆಎಸ್‌ಸಿಎ ಸಭೆಯಲ್ಲಿ ಈ ಕುರಿತು ತೀರ್ಮಾನ ತೆಗೆದುಕೊಂಡು ಕೆಲಸ ಪ್ರಾರಂಭಿಸುವುದಾಗಿ ಹೇಳಿದರು.

ತಹಸೀಲ್ದಾರ್ ಶಿವಶಂಕರ್, ಕೆಎಸ್‌ಸಿಎ ಮಂಗಳೂರು ವಲಯದ ಸಂಯೋಜಕ ರತನ್, ಯೂನಿಯನ್ ಕ್ರಿಕೆಟರ್ಸ್ ಸಂಸ್ಥೆ ಕಾರ್ಯದರ್ಶಿ ವಿಶ್ವನಾಥ ನಾಯಕ್, ಉಪಾಧ್ಯಕ್ಷ ಪ್ರಸಾದ್ ಕೌಶಲ್ ಶೆಟ್ಟಿ, ಕೋಶಾಧಿಕಾರಿ ಶ್ರೀಕಾಂತ್ ಕೊಳತ್ತಾಯ, ತರಬೇತುದಾರ ಎಲಿಯಾಸ್ ಪಿಂಟೋ, ಸದಸ್ಯರಾದ ವಾಮನ ಪೈ, ಕಾಂಗ್ರೆಸ್ ಮುಖಂಡರಾದ ಎಂ.ಬಿ.ವಿಶ್ವನಾಥ ರೈ, ಉಮಾನಾಥ ಶೆಟ್ಟಿ ಪೆರ್ನೆ, ಅಮಲ ರಾಮಚಂದ್ರ, ಕೃಷ್ಣಪ್ರಸಾದ್ ಮತ್ತು ಇತರರು ಸ್ಥಳದಲ್ಲಿ ಉಪಸ್ಥಿತರಿದ್ದರು.


Post a Comment

0 Comments

Please Select Embedded Mode To show the Comment System.*

#buttons=(Ok, Go it!) #days=(20)

Our website uses cookies to enhance your experience. Check Out
Ok, Go it!