ಆದಾಯ ತೆರಿಗೆ ರೀಫಂಡ್ ಪ್ರಕ್ರಿಯೆ ಅವಧಿ 16 ದಿನಗಳಿಂದ 10 ದಿನಗಳಿಗೆ ಇಳಿಸಲು ಚಿಂತನೆ
ಆದಾಯ ತೆರಿಗೆ ಇಲಾಖೆಯು ತೆರಿಗೆ ಮರುಪಾವತಿಯನ್ನು ಪಡೆಯುವ ಸರಾಸರಿ ಪ್ರಕ್ರಿಯೆ ಸಮಯವನ್ನು ಕಡಿಮೆ ಮಾಡಲು ಯೋಜಿಸುತ್ತಿದೆ. ತೆರಿಗೆ ಇಲಾಖೆಯು ಪ್ರಸ್ತುತ 16 ದಿನಗಳಿಂದ 10 ಕ್ಕೆ ದಿನಗಳನ್ನು ಕಡಿತಗೊಳಿಸುವ ಬಗ್ಗೆ ಚಿಂತನೆ ನಡೆಸುತ್ತಿದೆ. ಪ್ರಸಕ್ತ ಹಣಕಾಸು ವರ್ಷದಲ್ಲಿ ಹೊಸ ಟೈಮ್ಲೈನ್ ಜಾರಿಗೆ ಬರುವ ನಿರೀಕ್ಷೆಯಿದೆ ಎಂದು ಬಿಸಿನೆಸ್ ಸ್ಟ್ಯಾಂಡರ್ಡ್ನಲ್ಲಿನ ವರದಿ ಹೇಳಿದೆ.
ಆದಾಯ ತೆರಿಗೆ ರೀಫಂಡ್ ಸ್ಥಿತಿಗತಿ ಅರಿಯುವುದಕ್ಕೆ ಸಂಬಂಧಿಸಿದ ಹಲವು ಪ್ರಶ್ನೆಗಳಿವೆ. ಆದ್ದರಿಂದ ಇ-ಫೈಲಿಂಗ್ ನಂತರ ಮರುಪಾವತಿಯನ್ನು ಪಡೆಯಬೇಕಾಗಿರುವ ತೆರಿಗೆದಾರರಿಗೆ ಪಾವತಿಯನ್ನು ತ್ವರಿತಗೊಳಿಸಲು ಇದು ಉತ್ತಮ ಕ್ರಮ. ಹೆಚ್ಚಿನ ಸಂಖ್ಯೆಯ ತೆರಿಗೆದಾರರು ಸಕಾಲದಲ್ಲಿ ಐಟಿ ರಿಟರ್ನ್ಸ್ ಸಲ್ಲಿಸಿದ್ದಾರೆ. ಆದ್ದರಿಂದ ಮರುಪಾವತಿಯನ್ನು ಶೀಘ್ರಗೊಳಿಸುವ ನಿರೀಕ್ಷೆಯಿದೆ ಎಂಬುದು ಪರಿಣತರು ಅಭಿಮತ ಎಂದು ವರದಿ ವಿವರಿಸಿದೆ.
ಮರುಪಾವತಿಯನ್ನು ಸ್ವೀಕರಿಸಲು ಎಷ್ಟು ಸಮಯ ತೆಗೆದುಕೊಳ್ಳುತ್ತದೆ ಎಂಬುದು ಸಾಧಾರಣವಾಗಿ ಕೇಳುವ ಪ್ರಶ್ನೆ. ಮರುಪಾವತಿ ತಕ್ಷಣವೇ ಬರುವುದಿಲ್ಲ ಆದರೆ ಈಗಾಗಲೇ ಪಾವತಿಸಿದ ತೆರಿಗೆಗಳ ವಿವರಗಳನ್ನು ಆದಾಯ ತೆರಿಗೆ ಇಲಾಖೆಯು ಮಾಹಿತಿಯಿಂದ ಪರಿಶೀಲಿಸಿದ ನಂತರ ಮಾತ್ರ ನೀಡಲಾಗುತ್ತದೆ ಎಂಬ ವಿವರಣೆ ನೀಡುತ್ತಾರೆ ತಜ್ಞರು.
ಸಾಮಾನ್ಯವಾಗಿ, ನಿಮ್ಮ ಐಟಿಆರ್ ಅನ್ನು ಸಲ್ಲಿಸಿದ ಮತ್ತು ಪರಿಶೀಲಿಸಿದ ನಂತರ ಮರುಪಾವತಿಯು ನಿಮ್ಮನ್ನು ತಲುಪಲು 20-45 ದಿನಗಳನ್ನು ತೆಗೆದುಕೊಳ್ಳುತ್ತದೆ. ಆದಾಗ್ಯೂ, ಈ FY 2022-23, ತೆರಿಗೆ ಇಲಾಖೆಯು ಸುಧಾರಿತ ತಂತ್ರಜ್ಞಾನವನ್ನು ಬಳಸಿಕೊಂಡು ಆದಾಯ ತೆರಿಗೆ ರಿಟರ್ನ್ಸ್ (ITR ಗಳು) ಪ್ರಕ್ರಿಯೆಯನ್ನು ತ್ವರಿತಗೊಳಿಸಿದೆ. ಪರಿಣಾಮವಾಗಿ, ಸರಾಸರಿ ಸಂಸ್ಕರಣೆಯ ಸಮಯವನ್ನು ಕೇವಲ 16 ದಿನಗಳಿಗೆ ಇಳಿಸಲಾಗಿದೆ ಎಂದು ತೆರಿಗೆ ತಜ್ಞರು ವಿವರಿಸುತ್ತಾರೆ.
6.77 ಕೋಟಿಗೂ ಅಧಿಕ ಹೊಸ ಐಟಿಆರ್ ಸಲ್ಲಿಕೆ
ತೆರಿಗೆ ಇಲಾಖೆಯ ದತ್ತಾಂಶ ಪ್ರಕಾರ, 2023ರ ಜುಲೈ 31ರ ತನಕ 6.77 ಕೋಟಿಗೂ ಅಧಿಕ ಹೊಸ ಐಟಿಆರ್ ಸಲ್ಲಿಸಲ್ಪಟ್ಟಿವೆ. ಹಿಂದಿನ ವರ್ಷದ ದತ್ತಾಂಶ ಪ್ರಕಾರ 5.83 ಕೋಟಿ ಹೊಸ ಐಟಿಆರ್ ಗಿಂತ ಶೇಕಡ 16.1 ಹೆಚ್ಚಳ ದಾಖಲಾಗಿದೆ.