ಪುತ್ತೂರು ಶ್ರೀ ಮಹಾಲಿಂಗೇಶ್ವರ ದೇವರ ಇತಿಹಾಸ; ಬಂಗರಾಜನ ಪಟ್ಟದ ಆನೆ ಮತ್ತು ಪುತ್ತೂರಿನ ಮಹಾಲಿಂಗೇಶ್ವರ ದೇವರು

ಪುತ್ತೂರು ಶ್ರೀ ಮಹಾಲಿಂಗೇಶ್ವರ ದೇವರ ಇತಿಹಾಸ; ಬಂಗರಾಜನ ಪಟ್ಟದ ಆನೆ ಮತ್ತು ಪುತ್ತೂರಿನ ಮಹಾಲಿಂಗೇಶ್ವರ ದೇವರು


 


ಕರ್ನಾಟಕದ ಬಹಳ ಪ್ರಸಿದ್ದ ದೇವಾಲಯಗಳ ಪೈಕಿ ಮಹತೋಭಾರ ಶ್ರೀ ಮಹಾಲಿಂಗೇಶ್ವರ ದೇವಸ್ಥಾನ (Mahatobhaara Shree Mahalingeshwara Temple)ವೂ ಒಂದು. ಇದು ದಕ್ಷಿಣ ಕನ್ನಡ ಜಿಲ್ಲೆಯ ಪುತ್ತೂರು (Puttur) ನಗರದ ಕೇಂದ್ರ ಭಾಗದಲ್ಲಿದೆ. ಇದು 12ನೇ ಶತಮಾನದ ದೇವಸ್ಥಾನ ಎಂದು ನಂಬಲಾಗುತ್ತಿದೆ. ಕರ್ನಾಟಕ ಸರ್ಕಾರದ ಹಿಂದೂ ಧಾರ್ಮಿಕ ದತ್ತಿ ಇಲಾಖೆಯ ಅಧೀನದಲ್ಲಿದೆ ದೇಗುಲ.

ಪುತ್ತೂರು ಸುದ್ದಿ (Puttur Suddi) ಗಮನಿಸಿದರೆ, ನಿತ್ಯವೂ ಮಹಾಲಿಂಗೇಶ್ವರ ಗಮನ ಸೆಳೆದೇ ಸೆಳೆಯುತ್ತಾನೆ. ಹತ್ತೂರಿನ ಒಡೆಯನಾಗಿ ಪುತ್ತೂರು ಶ್ರೀ ಮಹಾಲಿಂಗೇಶ್ವರ ದೇವರ ಪ್ರಭಾವಳಿ ಪುತ್ತೂರಿನ ಸುತ್ತಮುತ್ತ ಹರಡಿಕೊಂಡಿದೆ. ಪುತ್ತೂರಿನ ಮಟ್ಟಿಗೆ ಶ್ರೀ ಮಹಾಲಿಂಗೇಶ್ವರ ಮತ್ತು ಪರಿವಾರ ದೇವ, ದೇವತೆಯರದ್ದೇ ಶ್ರೀರಕ್ಷೆ. ಸ್ವಯಂಭೂ ದೇವರು ಎಂದೇ ಶ್ರೀ ಮಹಾಲಿಂಗೇಶ್ವರ ದೇವರು ಜನಜನಿತರಾದವರು. ಶ್ರೀ ದೇವರ ಕುರಿತಾದ ನಿಖರ ಸ್ಥಳ ಪುರಾಣ ಲಭ್ಯವಿಲ್ಲದೇ ಹೋದರೂ, ಜನಜನಿತ ಕಥೆಗಳು ಅನೇಕ ಇವೆ.

ಪುತ್ತೂರು ಶ್ರೀ ಮಹಾಲಿಂಗೇಶ್ವರ ದೇವರ ಇತಿಹಾಸ

ಹಿಂದೂ ಧಾರ್ಮಿಕ ದತ್ತಿ ಇಲಾಖೆ ಪ್ರಕಟಿಸಿರುವ ಸ್ವಯಂಭೂ ಮಹಾಲಿಂಗೇಶ್ವರ ಕೃತಿಯಲ್ಲಿರುವ ಪ್ರಕಾರ, ವೇದ ವೇದಾಂಗ ಪಾರಂಗತ ಶಿವ ಭಕ್ತರೊಬ್ಬರು ಪ್ರಾಚೀನ ಕಾಲದಲ್ಲಿ ಕಾಶೀಕ್ಷೇತ್ರದಿಂದ ಶಿವಲಿಂಗವನ್ನು ತನ್ನ ಸಂಪುಟದಲ್ಲಿ ಇರಿಸಿಕೊಂಡು ಅದನ್ನು ಅರ್ಚಿಸುತ್ತ, ಪೂಜಿಸುತ್ತ ದಕ್ಷಿಣ ಪಥದಲ್ಲಿ ಸಂಚರಿಸುತ್ತ ಕರ್ನಾಟಕಕ್ಕೆ ಬಂದಿದ್ದರು. ಹಾಗೆಯೇ ಮುಂದುವರಿದು ಮೋಕ್ಷಪ್ರಧಾನವಾದ ಪ್ರಸಿದ್ಧ ಶಿವ ಕ್ಷೇತ್ರ ಗಯಾಪದ ಕ್ಷೇತ್ರವಾದ ಉಪ್ಪಿನಂಗಡಿಗೆ ಬಂದಿದ್ದರು. ಅಲ್ಲಿಂದ ಪುತ್ತೂರಿಗೂ ಪ್ರಯಾಣಿಸಿದ್ದರು.

ಶಿವನ ತ್ರಿಕಾಲ ಪೂಜೆ ಮಾಡುವುದನ್ನು ರೂಢಿಮಾಡಿಕೊಂಡಿದ್ದ ಶಿವಭಕ್ತರು, ಪುತ್ತೂರಿನಲ್ಲಿ ಅರಿತೋ ಅರಿಯದೆಯೋ ತನ್ನಲ್ಲಿದ್ದ ಶಿವಲಿಂಗವನ್ನು ಮರದ ನೆರಳಿನಲ್ಲಿ ಭೂಮಿಯ ಮೇಲೆ ಇರಿಸಿ ಪೂಜೆ ಮಾಡಿದ್ದರು. ಪೂಜೆ ಪುನಸ್ಕಾರ ಮುಗಿದ ಬಳಿಕ ಶಿವಲಿಂಗವನ್ನು ಮತ್ತೆ ಸಂಪುಟಕ್ಕೆ ಸೇರಿಸಲು ಮೇಲೆತ್ತಲು ನೋಡಿದರೆ, ಲಿಂಗ ಭೂಮಿಯೊಳಗೆ ಆಳಕ್ಕೆ ಇಳಿದು ಸ್ವಯಂಭೂ ಆಗಿತ್ತು. ಶಿವಭಕ್ತರು ಶಿವಲಿಂಗವನ್ನು ಮೇಲೆತ್ತಲು ಇನ್ನಿಲ್ಲದ ಶ್ರಮವಹಿಸಿದರೂ, ಫಲ ಸಿಗಲಿಲ್ಲ.

ಕೊನೆಗೆ ಅವರು ಊರ ಅರಸನಾದ ಬಂಗರಾಜರನ್ನು ಭೇಟಿಯಾದರು. ಅವರ ಬಳಿ ತನ್ನ ಅಳಲು ತೋಡಿಕೊಂಡರು. ಆಗ, ಲಿಂಗವನ್ನು ಎತ್ತಿ ಶಿವಭಕ್ತರ ಸಂಪುಟಕ್ಕೆ ಸೇರಿಸಲು ಬಂಗರಾಜ ತನ್ನ ಆಳುಗಳನ್ನು ಕಳುಹಿಸಿದರು. ಅವರೂ ಸ್ಥಳಕ್ಕೆ ತೆರಳಿ ಪ್ರಯತ್ನಿಸಿ ಕೈಚೆಲ್ಲಿದರು. ಇದನ್ನು ಸವಾಲಾಗಿ ಸ್ವೀಕರಿಸಿದ ಬಂಗರಾಜ, ಸ್ವತಃ ತನ್ನ ಪಟ್ಟದಾನೆಯೊಂದಿಗೆ ಸ್ಥಳಕ್ಕೆ ಬಂದರು. ಅಲ್ಲಿ ಲಿಂಗವನ್ನು ಮೇಲೆತ್ತಲು ಪಟ್ಟದಾನೆಯನ್ನೇ ಬಳಸಿದರು.

ಬಂಗರಾಜನ ಪಟ್ಟದ ಆನೆ ಸೊಂಡಿಲನ್ನು ಬಳಸಿ ಲಿಂಗವನ್ನು ಮೇಲೆತ್ತಲು ಪ್ರಯತ್ನಿಸಿತು. ಆಗ ವಿಚತ್ರ ಘಟನೆ ನಡೆಯಿತು. ಸಣ್ಣ ಆಕಾರ ಲಿಂಗ ದಿಢೀರ್ ಮೇಲಕ್ಕೆ ಬೆಳೆದು ಮಹಾಲಿಂಗದ ರೂಪ ತಾಳಿತು. ಶಿವಲಿಂಗದ ಮಹಿಮೆ ಅರಿಯದ ರಾಜ, ಆನೆಯ ಮೂಲಕ ಅದನ್ನು ಅಲ್ಲಿಂದ ಕೀಳುವ ಪ್ರಯತ್ನ ಮುಂದುವರಿಸಿದ. ಪರಿಣಾಮ, ಆನೆಯ ಅಂಗಾಂಗಗಳು ಛಿದ್ರವಾಗಿ ದಶದಿಕ್ಕಿಗೆ ಚದುರಿ ಬಿದ್ದು ಹೋದವು.

ಎಲ್ಲ ವಿದ್ಯಮಾನಗಳಿಂದ ಎಚ್ಚೆತ್ತುಕೊಂಡ ಬಂಗರಾಜ ಕೂಡಲೇ ಮಹಾಲಿಂಗವನ್ನು ಪೂಜಿಸಿ, ಅಲ್ಲೇ ಗುಡಿಯನ್ನು ನಿರ್ಮಿಸಿ ನಿತ್ಯಪೂಜೆ ನೆರವೇರುವಂತೆ ಕ್ರಮ ತೆಗೆದುಕೊಂಡ ಎಂಬುದು ಇತಿಹಾಸ.

ಪುತ್ತೂರಿನ ಸುತ್ತಮುತ್ತಲಿನ ಊರ ಹೆಸರುಗಳ ಇತಿಹಾಸಕ್ಕೂ ಮಹಾಲಿಂಗೇಶ್ವರ ದೇವರ ನಂಟು

ಆನೆಯ ಕಾರ್ಯ ಶಿವದೇವರಿಗೆ ಕೋಪ ತರಿಸಿದ್ದು, ಪುತ್ತೂರಿನ ಕೆರೆಯ ನೀರು ಆನೆಗಳಿಗೆ ನಿಷಿದ್ಧ ಎಂಬ ಪ್ರತೀತಿ ಇದೆ. ದೇಗುಲದಲ್ಲಿ ಗಜಲಾಂಛನ ಬಳಕೆಗೂ ನಿಷೇಧ ಇರುವಂಥ ವಿಚಾರ ಜನಜನಿತವಾಗಿದೆ.

ಅಂದು ಆನೆಯ ಅಂಗಾಂಗ ಚದುರಿ ಬಿದ್ದ ಪ್ರದೇಶಗಳು ಅದಕ್ಕೆ ಹೊಂದಿಕೊಂಡ ಹೆಸರಿನೊಂದಿಗೆ ಗುರುತಿಸಲ್ಪಟ್ಟಿವೆ. ಆನೆಯ ತಲೆಯ ಭಾಗ ಬಿದ್ದ ಊರು ತಾಲೆಪ್ಪಾಡಿ, ಕೊಂಬು (ದಂತ) ಬಿದ್ದ ಸ್ಥಳ ಕೊಂಬೆಟ್ಟು, ಕಾಲು ಬಿದ್ದ ಊರು ಕಾರ್ಜಾಲು, ಬೆನ್ನು ಬಿದ್ದ ಸ್ಥಳ ಬೆರಿಪದವು, ಬಾಲ ಬಿದ್ದ ಪ್ರದೇಶ ಬೀದಿಮಜಲು, ಕರಿ ಬಿದ್ದ ಊರು ಕರಿಯಾಲ, ಕೈ ಬಿದ್ದ ಸ್ಥಳ ಕೈಪಳ, ಕಾಯ(ಶರೀರ) ಬಿದ್ದ ಊರು ಕಾಯರ್ಮಜಲು ಆದವು.

ಪುತ್ತೂರಿನ ಮಹಾಲಿಂಗೇಶ್ವರ ದೇವಾಲಯ ಆರಂಭಕಾಲದಲ್ಲಿ ಇದ್ದಂತೆ ಗಜಪೃಷ್ಠದ ಆಕಾರಕ್ಕೆ ಕೆಲ ವರ್ಷಗಳ ಹಿಂದೆ ಮರಳಿದೆ. ಸ್ವಯಂಭೂ ಶಿವಲಿಂಗ ಮಹಾಲಿಂಗೇಶ್ವರನಾಗಿ ಪುತ್ತೂರಿನ ಜನರ, ಒಳಿತು, ಅಭಿವೃದ್ಧಿಗೆ ಅಭಯ ನೀಡುತ್ತಿರುವುದು ವಿಶೇಷ. ಇದು ಜನರ ನಂಬಿಕೆಯ ವಿಚಾರವೂ ಹೌದು.Ads on article

Advertise in articles 1

advertising articles 2

Advertise under the article