ವಿಮಾನವೇರಿದ ಕೂಡಲೇ ಅದರಲ್ಲಿದ್ದ ಎಲ್ಲ ಶೇಂಗಾ ಪ್ಯಾಕೆಟ್ ಖರೀದಿಸಿದ ಮಹಿಳೆ; ಅಂಥದ್ದೇನಾಗಿತ್ತು ಆಕೆಗೆ
ಆಕೆ ವಿಮಾನ ಪ್ರಯಾಣದಲ್ಲಿದ್ದಾಗ ಗಗನ ಸಖಿಯರು ಕಡಲೆಕಾಯಿ ಪ್ಯಾಕೆಟ್ ಬೇಕಾ ಎಂದು ಕೇಳ್ತಾ ಬರುತ್ತಿರುವುದು ಗೋಚರಿಸಿತು. ಆ ಎಲ್ಲ ಶೇಂಗಾ ಪ್ಯಾಕೆಟ್ ಖರೀದಿಸುವುದು ಬಿಟ್ಟು ಬೇರೆ ದಾರಿ ಇಲ್ಲ ಎಂದುಕೊಳ್ಳುತ್ತ ಆ ಮಹಿಳೆ ಅವೆಲ್ಲವನ್ನೂ ದುಬಾರಿ ಹಣಕೊಟ್ಟು ಖರೀದಿ ಮಾಡಿಬಿಡುತ್ತಾಳೆ.
ಕಾರಣ ಇಷ್ಟೆ. ಆಕೆಗೆ ಕಡಲೆಕಾಯಿ ಅಲರ್ಜಿ. ಸಹ ಪ್ರಯಾಣಿಕರು ಆ ನೆಲಗಡಲೆ ಪ್ಯಾಕೆಟ್ ಖರೀದಿಸಿ ತಿನ್ನಲಾರಂಭಿಸಿದರೆ ತನ್ನ ವಿಮಾನ ಪ್ರಯಾಣ ಸುಖಕರವಾಗಿರುವುದಿಲ್ಲ. ಜೀವಕ್ಕೆ ಅಪಾಯ ಉಂಟಾಗುತ್ತದೆ ಎಂಬುದು ಆಕೆಯ ಮನಸ್ಸಿಗೆ ಬಂದಿತ್ತು. ಸಿಬ್ಬಂದಿಗೆ ಮನವಿ ಮಾಡಿದರೆ ಅವರು ಕಿವಿಗೊಡಲು ಎಂಬುದು ಮನದಟ್ಟಾದ ಬಳಿಕ ಎಲ್ಲ ಪ್ಯಾಕೆಟ್ಗಳನ್ನು ಖರೀದಿಸಿದಳು.
ಆ ಮಹಿಳೆಯ ಹೆಸರು ಲಿಯಾ ವಿಲಿಯಮ್ಸ್. ಆಕೆ ಲಂಡನ್ನಿಂದ ಜರ್ಮನಿಯ ಡಸೆಲ್ಡಾರ್ಫ್ಗೆ ಯುರೋವಿಂಗ್ಸ್ ವಿಮಾನದಲ್ಲಿ ಪ್ರಯಾಣಿಸುತ್ತಿದ್ದಾಗ ಈ ಘಟನೆ ನಡೆದಿದೆ. ವಿಮಾನ ಸಿಬ್ಬಂದಿ ಸಹಕರಿಸಿರಲಿಲ್ಲ. ಕೊನೆಗೆ 144 ಬ್ರಿಟನ್ ಪೌಂಡ್ ಕೊಟ್ಟು 48 ಪ್ಯಾಕೆಟ್ ಶೇಂಗಾ ಖರೀದಿಸಿದ್ದಳು. ಇದು ಆಕೆಯ ವಿಮಾನದ ಟಿಕೆಟ್ ಬೆಲೆಗಿಂತ ಮೂರು ಪಟ್ಟು ಹೆಚ್ಚು. ವಿಮಾನ ಇಳಿದ ಬಳಿಕ ಶೇಂಗಾ ಪ್ಯಾಕೆಟ್ ವಾಪಸ್ ಕೊಟ್ಟು ಹಣ ಹಿಂದಿರುಗಿಸುವಂತೆ ಆಕೆ ಕೇಳಿಕೊಂಡಿದ್ಧಾಳೆ. ಆದರೆ, ವಿಮಾನ ಕಂಪನಿ ಇದನ್ನು ಅಂಗೀಕರಿಸಿಲ್ಲ.
ಇನ್ಸೈಡರ್ ಮ್ಯಾಗಜಿನ್ ಈ ಮಹಿಳೆ ಹೇಳಿರುವುದನ್ನು ಆಧರಿಸಿ ವರದಿ ಪ್ರಕಟಿಸಿದೆ. ಯೂರೋ ವಿಂಗ್ಸ್ ವಕ್ತಾರರು ಈಕೆಯ ವಾದವನ್ನು ತಿರಸ್ಕರಿಸಿದ್ದಾರೆ. ವಿಮಾನ ಸಿಬ್ಬಂದಿ ಲಿಯಾ ಸುತ್ತ ಕುಳಿತಿರುವ ಪ್ರಯಾಣಿಕರ ಬಳಿ ವಿನಂತಿ ಮಾಡಿ ಶೇಂಗಾ ಖರೀದಿಸದಂತೆ ನೋಡಿಕೊಂಡಿದ್ದರು. ಆದರೆ ಶೇಂಗಾ ಮಾರಾಟ ಮಾಡಬಾರದು ಎಂಬ ಕಾರಣಕ್ಕೆ ಆಕೆಯೇ ಎಲ್ಲ ಶೇಂಗಾ ಪ್ಯಾಕೆಟ್ ಖರೀದಿಸಿದ್ದರು ಎಂದು ಹೇಳಿದ್ದಾರೆ. ಶೇಂಗಾ ಬೀಜದ ಪ್ಯಾಕೆಟ್ ತೆರೆದಾಗ ಅದರ ಧೂಳು ಹರಡಿ ಅಸ್ತಮಾ ಹೆಚ್ಚಾಗಬಹುದು ಎಂಬ ಆತಂಕ ಲಿಯಾಗೆ ಇತ್ತು. ಹೀಗಾಗಿ, ಈ ವಿಚಾರ ಈಗ ಟ್ರೆಂಡಿಂಗ್ನಲ್ಲಿದೆ.