ವಿವೇಕಾನಂದ ಇಂಜಿನಿಯರಿಂಗ್ ಕಾಲೇಜಿನಲ್ಲಿ ಇಂಜಿನಿಯರ್ಸ್ ಡೇ ಆಚರಣೆ

ವಿವೇಕಾನಂದ ಇಂಜಿನಿಯರಿಂಗ್ ಕಾಲೇಜಿನಲ್ಲಿ ಇಂಜಿನಿಯರ್ಸ್ ಡೇ ಆಚರಣೆ

 

ಪುತ್ತೂರು: ಸರ್ ಎಂ.ವಿಶ್ವೇಶ್ವರಯ್ಯ ಅವರು ನಮ್ಮ ನಾಡಿನ ಹೆಮ್ಮೆಯ ಪುತ್ರ, ದೇಶ ಕಂಡ ಅಪ್ರತಿಮ ಇಂಜಿನಿಯರ್‌. ಅವರು ಕಲಿಸಿಕೊಟ್ಟ ಶ್ರಮ ಮತ್ತು ಪ್ರಾಮಾಣಿಕತೆಯ ಪಾಠ ಪ್ರತಿಯೊಬ್ಬರ ಜೀವನಕ್ಕೂ ಅಗತ್ಯವಾದುದು. ಅದನ್ನು ಅಳವಡಿಸಿಕೊಳ್ಳಬೇಕು. ಆ ಮೂಲಕ ದೇಶದ ಅಭಿವೃದ್ಧಿಗೆ ತಮ್ಮ ಕೊಡುಗೆ ನೀಡಬೇಕು ಎಂದು ಪುತ್ತೂರು ನಗರಸಭೆ ಆಯುಕ್ತ ಮಧು ಎಸ್. ಮನೋಹರ್ ಹೇಳಿದರು. 

ಅವರು ಶುಕ್ರವಾರ, ವಿವೇಕಾನಂದ ಕಾಲೇಜ್ ಆಫ್ ಇಂಜಿನಿಯರಿಂಗ್ ಎಂಡ್ ಟೆಕ್ನಾಲಜಿಯ ಸಿವಿಲ್ ಇಂಜಿನಿಯರಿಂಗ್ ವಿಭಾಗ, ಐಎಸ್‌ಟಿಇ ಘಟಕ ಮತ್ತು ಕಾಲೇಜಿನ ಇನ್‌ಸ್ಟಿಟ್ಯೂಶನ್ ಇನ್ನೋವೇಶನ್ ಕೌನ್ಸಿಲ್‌ನ ಸಂಯುಕ್ತ ಆಶ್ರಯದಲ್ಲಿ ಆಯೋಜಿಸಲಾಗಿದ್ದ ಇಂಜಿನಿಯರ್ಸ್‌ ಡೇ ಕಾರ್ಯಕ್ರಮದ  ಮುಖ್ಯ ಅತಿಥಿಯಾಗಿ ಭಾಗವಹಿಸಿ ಮಾತನಾಡಿದರು. 

ಸರ್.ಎಂ.ವಿಶ್ವೇಶ್ವರಯ್ಯ ಅವರ ವಿಚಾರಧಾರೆ ದೇಶದ ಬೆಳವಣಿಗೆಗೆ ಸಿಕ್ಕ ದಿಕ್ಸೂಚಿ. ಅದರಂತೆ ಈಗ ದೇಶ ಮುನ್ನಡೆಯುತ್ತಿದೆ. ಅವರ ದೂರದರ್ಶಿ ಯೋಚನೆ ಮತ್ತು ಯೋಜನೆಗಳು ದೇಶದ ಅಭಿವೃದ್ಧಿಗೆ ಬುನಾದಿಯಂತೆ ಕೆಲಸ ಮಾಡುತ್ತಿವೆ. ಇದು ಅವರ ಬುದ್ಧಿವಂತಿಕೆಗೆ ಸಾಕ್ಷಿಯಾಗಿದೆ ಎಂದು ಮಧು ಎಸ್. ಮನೋಹರ್ ಹೇಳಿದರು. 

ತಂತ್ರಜ್ಞಾನ ಕ್ಷೇತ್ರವು ದಿನೇದಿನೆ ಬದಲಾಗುತ್ತಿದ್ದು, ಅದಕ್ಕೆ ತಕ್ಕಂತೆ ಇಂಜಿನಿಯರ್‌ಗಳು ಕೂಡ ತಮ್ಮ ಕಾರ್ಯಕ್ಷೇತ್ರದಲ್ಲಿ ಆ ಬದಲಾವಣೆಗಳನ್ನು ಅಳವಡಿಸಿಕೊಂಡು ಸಮಾಜದ ಉನ್ನತಿಗೆ ಕೆಲಸ ಮಾಡಬೇಕು. ದೇಶದ ಏಳಿಗೆಗೆ ಶ್ರಮವಹಿಸಬೇಕು ಎಂದು ಅವರು ಹೇಳಿದರು. 

ದೇಶದ ಇತಿಹಾಸದಲ್ಲಿ ಹೊಸ ಆಯಾಮ ಸೃಷ್ಟಿಸಿದ ಸರ್ ಎಂ.ವಿ. - ಸತ್ಯನಾರಾಯಣ ಭಟ್ 

ದೇಶದ ಇತಿಹಾಸವನ್ನು ಗಮನಿಸಿದರೆ ಅದಕ್ಕೆ ಹೊಸ ಆಯಾಮವನ್ನು ಕೊಟ್ಟವರು ಸರ್ ಎಂ.ವಿಶ್ವೇಶ್ವರಯ್ಯ ಎಂಬುದು ಮನವರಿಕೆಯಾಗುತ್ತದೆ. ಅವರ ಅದಮ್ಯ ಚೇತನ, ಕ್ರಮ ನಿಷ್ಠವಾದ ಬದುಕು ಮತ್ತು ಜೀವನಶೈಲಿ ಎಲ್ಲರಿಗೂ ಆದರ್ಶ. ಅವರು ಆ ರೀತಿ ಕೆಲಸ ಮಾಡಿದ್ದರಿಂದಲೇ ದೇಶದ ಅಭಿವೃದ್ಧಿಗೆ ಒಂದು ದಿಶೆ ಒದಗಿಸುವುದು ಸಾಧ್ಯವಾಯಿತು ಎಂದು ಕಾಲೇಜು ಆಡಳಿತ ಮಂಡಳಿ ನಿರ್ದೇಶಕ ಸತ್ಯನಾರಾಯಣ ಭಟ್ ಅಧ್ಯಕ್ಷತೆ ವಹಿಸಿ ಮಾತನಾಡುತ್ತ ಹೇಳಿದರು.

ವೇದಿಕೆಯಲ್ಲಿ ಕಾಲೇಜಿನ ಐಎಸ್‌ಟಿಇ ಘಟಕದ ಸಂಯೋಜಕ ಮೆಕ್ಯಾನಿಕಲ್ ಎಂಜಿನಿಯರಿಂಗ್ ವಿಭಾಗ ಮುಖ್ಯಸ್ಥ ಡಾ.ಮನುಜೇಶ್.ಬಿ.ಜೆ ಉಪಸ್ಥಿತರಿದ್ದರು. ಸಿವಿಲ್ ಇಂಜಿನಿಯರಿಂಗ್ ವಿಭಾಗ ಮುಖ್ಯಸ್ಮ ಪ್ರೊ.ಪ್ರಶಾಂತ ಸ್ವಾಗತಿಸಿದರು. ಡಾ.ಆನಂದ್.ವಿ. ವಿಶ್ವೇಶ್ವರಯ್ಯನವರ ಜೀವನ ಸಾಧನೆ ಕುರಿತ ವಿವರ ನೀಡಿದರು. ಪಲ್ಲವಿ ಕಾರ್ಯಕ್ರಮ ನಿರ್ವಹಿಸಿದರು. ವಿದ್ಯಾರ್ಥಿನಿ ಭವಾನಿ ವಂದಿಸಿದರು. 

Ads on article

Advertise in articles 1

advertising articles 2

Advertise under the article