
ಇನ್ಶುರೆನ್ಸ್, ಮ್ಯೂಚುವಲ್ ಫಂಡ್ ಹೆಸರಿನ ವಂಚನೆಯ ಬಲೆಗೆ ಬೀಳಬೇಡಿ!
ಸೈಬರ್ ವಂಚನೆ ಇತ್ತೀಚಿನ ದಿನಗಳಲ್ಲಿ ಬಹಳಷ್ಟು ಹೆಚ್ಚಾಗಿದೆ. ಎಷ್ಟು ಜಾಗರೂಕರಾಗಿದ್ದರೂ, ಒಂದಿಲ್ಲೊಂದು ರೀತಿಯಲ್ಲಿ ವಂಚಕರ ಬಲೆಗೆ ಬೀಳುವ ವಿದ್ಯಮಾನ ಹೆಚ್ಚಾಗುತ್ತಿದೆ. ಅದಕ್ಕೆ ವಂಚಕರು ಅಳವಡಿಸಿಕೊಳ್ಳುವ ನಿತ್ಯ ನೂತನ ಕಾರ್ಯವಿಧಾನವೂ ಕಾರಣ. ಹೀಗಾಗಿ, ಅವರ ಕಾರ್ಯವಿಧಾನದ ಅರಿವು ಎಲ್ಲರಿಗೂ ಇರಬೇಕಾದ್ದು ಅವಶ್ಯ. ಈ ನಿಟ್ಟಿನಲ್ಲಿ ಬೆಂಗಳೂರು ಪೊಲೀಸರು ಸೈಬರ್ ಟಿಪ್ ಎ ಡೇ ಎಂಬ ಸರಣಿ ಪ್ರಾರಂಭಿಸಿದ್ದಾರೆ.
ಪೊಲೀಸ್ ಕಮೀಷನರ್ ಬಿ.ದಯಾನಂದ ಅವರ ಮಾತುಗಳಲ್ಲಿ ಇರುವ ಈ ಸರಣಿಯಲ್ಲಿ "ಸೈಬರ್ ವಂಚನೆಯ ಬಲೆಗೆ ಬೀಳಬೇಡಿ" ಎಂಬುದೇ ಕೇಂದ್ರಬಿಂದು. ತಿಳಿವಳಿಕೆ ನೀಡುವ ಉದ್ಧೇಶವೂ ಇದುವೇ..
ವಿಮೆ ಮತ್ತು ಮ್ಯೂಚುವಲ್ ಫಂಡ್ ಹೆಸರಲ್ಲಿ ವಂಚನೆ ನಡೆಯವುದು ಹೇಗೆ
ಪೊಲೀಸ್ ಕಮೀಷನರ್ ಬಿ.ದಯಾನಂದ ಅವರು ವಿವರಿಸಿರುವುದು ಹೀಗೆ
ನಿವೃತ್ತ ವ್ಯಕ್ತಿಗಳನ್ನು ಗುರಿಯಾಗಿಸಿಕೊಂಡು ಮಾಡುವ ಇನ್ಶುರೆನ್ಸ್ ಫ್ರಾಡ್ ಅಥವಾ ಮ್ಯೂಚುವಲ್ ಫಂಡ್ ಫ್ರಾಡ್ ಬಗ್ಗೆ ತಿಳಿದುಕೊಳ್ಳೋಣ.
- ಈ ರೀತಿಯ ಫ್ರಾಡ್‌ನಲ್ಲಿ ಸೈಬರ್ ವಂಚಕರು ನಿವೃತ್ತಿಯ ಅಂಚಿನಲ್ಲಿರುವ ಅಥವಾ ನಿವೃತ್ತಿ ಆಗಿರುವ ಜನರನ್ನು ಗುರುತಿಸುತ್ತಾರೆ.
- ಅವರಿಗೆ ಎಸ್‌ಎಂಎಸ್ ಅನ್ನು ಕಳುಹಿಸುವ ಮೂಲಕ ಅಥವಾ ವಾಟ್ಸ್ಆಪ್ ಮೂಲಕ ಅಥವಾ ಕೆಲವು ವೆಬ್‌ಸೈಟ್‌ಗಳ ಮೂಲಕ ಸಂಪರ್ಕಿಸುತ್ತಾರೆ.
- ಅವರ ರಿಟೈರ್‌ಮೆಂಟ್ ಬೆನಿಫಿಟ್ಸ್ ಹಣವನ್ನು ತಮ್ಮ ಕಂಪನಿಯ ಇನ್ಶುರೆನ್ಸ್ ಅಥವಾ ಮ್ಯೂಚುವಲ್ ಫಂಡ್‌ನಲ್ಲಿ ತೊಡಗಿಸಿದರೆ ಉತ್ತಮ ಲಾಭವನ್ನು ಗಳಿಸಬಹುದು ಎಂದು ನಂಬಿಸುತ್ತಾರೆ.
- ಇದಕ್ಕಾಗಿ ಬೇಕಾಗಿರುವ ಕಾಗದ ಪತ್ರಗಳನ್ನು ತಯಾರಿಸಲು ಮತ್ತು ಬಂಡವಾಳ ಹೂಡಿಕೆಗಾಗಿ ಕೊಡಬೇಕಾಗಿರುವ ಚೆಕ್‌ಗಳನ್ನು ತಮ್ಮ ಕಂಪನಿಯ ಎಕ್ಸಿಕ್ಯೂಟಿವ್‌ಗಳು ಮನೆಗೆ ಬಂದು ಸಂಗ್ರಹಿಸುತ್ತಾರೆ ಎಂದು ತಿಳಿಸುತ್ತಾರೆ.
- ಬಳಿಕ ತಮ್ಮ ಏಜೆಂಟ್‌ಗಳನ್ನು ಅವರ ಮನೆಗೆ ಕಳುಹಿಸಿ ಚೆಕ್‌ಗಳನ್ನು ಪಡೆದು ಅದನ್ನು ಬೇರೆ ಯಾವುದೋ ರಾಜ್ಯದಲ್ಲಿ, ಅಥವಾ ಊರಿನಲ್ಲಿ ನಗದು ಮಾಡಿಸಿಕೊಳ್ಳುತ್ತಾರೆ.
ವಿಮೆ ಮತ್ತು ಮ್ಯೂಚುವಲ್ ಫಂಡ್ ಹೆಸರಲ್ಲಿ ವಂಚನೆಯಿಂದ ದೂರ ಇರಬೇಕಾದರೆ ಮಾಡಬೇಕಾದ್ದು ಇಷ್ಟು
ಇಂತಹ ವಂಚನೆಯಿಂದ ದೂರ ಇರಲು ಜನರು ತಮ್ಮ ನಿವೃತ್ತಿಯ ಹಣವನ್ನು ತೊಡಗಿಸಿಕೊಳ್ಳುವಲ್ಲಿ ಜಾಣ್ಮೆಯನ್ನು ತೋರಬೇಕು.
- ನಿವೃತ್ತಿಯ ಹಣ ಬಂದಾಗ ಅಥವಾ ಬರುವುದಿದ್ದರೆ, ಅಂತಹ ಸನ್ನಿವೇಶದಲ್ಲಿ ಹೂಡಿಕೆ ಕುರಿತಾಗಿ ಪೂರ್ವಭಾವಿ ಸಿದ್ಧತೆಯನ್ನು ಮಾಡಬೇಕು. ಆನಂತರ ಲಾಭ ನಷ್ಟಗಳ ಲೆಕ್ಕ ಹಾಕಿ ಹಣ ತೊಡಗಿಸಬೇಕು.
- ಹಣ ಹೂಡಿಕೆ ವಿಚಾರದಲ್ಲಿ ಅಗತ್ಯ ಬಿದ್ದಲ್ಲಿ ಪರಿಣತರ ಸಲಹೆಯನ್ನು ಪಡೆಯಬೇಕು.
- ಹೊರತಾಗಿ ಈ ರೀತಿ ಅಂತರ್ಜಾಲದಲ್ಲಿ ಆಕರ್ಷಕವಾಗಿ ಕಾಣುವ ಜಾಹೀರಾತುಗಳಿಗೆ, ವೆಬ್‌ಸೈಟ್‌ಗಳಿಗೆ ಮರುಳಾಗಬಾರದು.
- ಅಂತರ್ಜಾಲದಲ್ಲಿ ಯಾವುದಾದರೂ ಇನ್ಶುರೆನ್ಸ್, ಮ್ಯೂಚುವಲ್ ಫಂಡ್ ವೆಬ್‌ಸೈಟ್ ತೆರೆಯುವಾಗ, ನೋಡುವಾಗ, ಆ ಮೂಲಕ ವ್ಯವಹಾರ ಮಾಡುವಾಗ ಅವು, ಆ ಕಂಪನಿಯ ಅಧಿಕೃತ ವೆಬ್‌ಸೈಟ್‌ಗಳೇ ಎನ್ನುವುದನ್ನು ಖಾತರಿಪಡಿಸಿಕೊಳ್ಳಬೇಕು.
- ಒಂದು ವೇಳೆ ಏನಾದರೂ, ಸಂಶಯ ಬಂದಲ್ಲಿ ಕೂಡಲೇ ಪೊಲೀಸರಿಗೆ ಮಾಹಿತಿ ನೀಡುವುದು ಸೂಕ್ತ.
Don't Fall for the Trap! 🛡️💸
— ಬೆಂಗಳೂರು ನಗರ ಪೊಲೀಸ್ BengaluruCityPolice (@BlrCityPolice) September 16, 2023
Stay Informed and Safeguard your Investments and Retirement Benefits Against Insurance and Mutual Fund Scams. #BeCyberSafe #CyberTipADay
ವಂಚನೆಯ ಬಲೆಗೆ ಬೀಳಬೇಡಿ!
ವಿಮೆ ಮತ್ತು ಮ್ಯೂಚುವಲ್ ಫಂಡ್ ಗಳಲ್ಲಿ ನಿಮ್ಮ ಹೂಡಿಕೆಗಳಲ್ಲಾಗುವ ಹಗರಣಗಳ ಕುರಿತು ಎಚ್ಚರವಿರಲಿ. pic.twitter.com/IZFMAJprpZ