ಕೇರಳ ಓಣಂ ಬಂಪರ್ ಲಾಟರಿಯಲ್ಲಿ ಉಪ್ಪಿನಂಗಡಿ ಚಂದ್ರಯ್ಯಗೆ 50 ಲಕ್ಷ ರೂಪಾಯಿ ಬಹುಮಾನ
ಪುತ್ತೂರು: ಕೇರಳ ಓಣಂ ಬಂಪರ್ ಲಾಟರಿ (Onam Bumper 2023 Lottery) ಯಲ್ಲಿ ಉಪ್ಪಿನಂಗಡಿಯ ಚಂದ್ರಯ್ಯ ಮೇಸ್ತ್ರಿಗೆ 50 ಲಕ್ಷ ರೂಪಾಯಿ ಬಹುಮಾನ ಒಲಿದಿದೆ.
ಉಪ್ಪಿನಂಗಡಿಯ ಇಳಂತಿಲ ನಿವಾಸಿ ಚಂದ್ರಯ್ಯ ಅವರು ವೃತ್ತಿಯಲ್ಲಿ ಮೇಸ್ತ್ರಿ. ಅವರು ಇತ್ತೀಚೆಗೆ ಕಾನತ್ತೂರು ದೇವಸ್ತಾನಕ್ಕೆ ಹೋಗಿದ್ದ ವೇಳೆ, ಅಲ್ಲಿ ಓಣಂ ಬಂಪರ್ 2023 ಲಾಟರಿ ಟಿಕೆಟ್ ಖರೀದಿಸಿದ್ದರು. 25 ಕೋಟಿ ರೂಪಾಯಿ ಬಂಪರ್ ಬಹುಮಾನದ ಈ ಲಾಟರಿ ಡ್ರಾ ಸೆಪ್ಟೆಂಬರ್ 20ರಂದು ಆಗಿತ್ತು. ಅದರಲ್ಲಿ ಬಂಪರ್ ಬಹುಮಾನವಲ್ಲದೆ, ಮೊದಲ, ಎರಡನೇ ಮತ್ತು ಮೂರನೇ ಬಹುಮಾನಗಳ ಜತೆಗೆ ಕೆಲವು ನಗದು ಬಹುಮಾನಗಳನ್ನೂ ಇರಿಸಲಾಗಿತ್ತು.
ಈ ಪೈಕಿ ಚಂದ್ರಯ್ಯ ಅವರಿಗೆ 50 ಲಕ್ಷ ರೂಪಾಯಿ ಬಹುಮಾನ ಬಂದಿದೆ. ಅವರು 500 ರೂಪಾಯಿ ಕೊಟ್ಟು ಕಾಸರಗೋಡಿನ ಬೊಲ್ಪು ಲಕ್ಕಿ ಲಾಟರಿ ಏಜೆನ್ಸಿಯ ಪ್ರತಿನಿಧಿಯಿಂದ ಓಣಂ ಬಂಪರ್ ಲಾಟರಿ ಟಿಕೆಟ್ ಖರೀದಿಸಿದ್ದರು.
ಕೇರಳ ಲಾಟರಿ ಟಿಕೆಟ್‌ನಲ್ಲಿ ಉಪ್ಪಿನಂಗಡಿ ಭಾಗದವರಿಗೆ ಇದು ಎರಡನೇ ಸಲ ಬಹುಮಾನ ಬಂದಿರುವುದು. ಈ ಹಿಂದೆ, ಉಪ್ಪಿನಂಗಡಿಯ ಕೆಂಪಿಮಜಲು ನಿವಾಸಿ ಆನಂದ ಟೈಲರ್‌ಗೆ 80 ಲಕ್ಷ ರೂಪಾಯಿ ಬಹುಮಾನ ಬಂದಿತ್ತು. ಅವರು ಕೂಡ ಬೊಲ್ಪು ಲಕ್ಕಿ ಲಾಟರಿ ಏಜೆನ್ಸಿಯ ಪ್ರತಿನಿಧಿಯಿಂದಲೇ ಟಿಕೆಟ್ ಖರೀದಿ ಮಾಡಿದ್ದರು ಎಂದು ಸ್ಥಳೀಯರು ತಿಳಿಸಿದ್ದಾರೆ.