White Deer at Cauvery Wildlife Sanctuary: ಕಾವೇರಿ ವನ್ಯಜೀವಿಧಾಮದಲ್ಲಿ ಬಿಳಿ ಬಣ್ಣದ ಕಡವೆಯ ಛಾಯಾಚಿತ್ರ ಸೆರೆ

White Deer at Cauvery Wildlife Sanctuary: ಕಾವೇರಿ ವನ್ಯಜೀವಿಧಾಮದಲ್ಲಿ ಬಿಳಿ ಬಣ್ಣದ ಕಡವೆಯ ಛಾಯಾಚಿತ್ರ ಸೆರೆ


ಬಿಳಿ ಬಣ್ಣದ ಕಡವೆ

ಕಾವೇರಿ ವನ್ಯಜೀವಿ ಧಾಮದಲ್ಲಿ ಚಿರತೆಗಳ ಬಗ್ಗೆ ಅಧ್ಯಯನ ನಡೆಸಲು ಡಾ.ಸಂಜಯ್ ಗುಬ್ಬಿ ಮತ್ತು ಅವರ ತಂಡವು ಅಳವಡಿಸಿದ್ದ ಕ್ಯಾಮರಾ ಟ್ರಾಪ್‌ನಲ್ಲಿ ಬಿಳಿ ಬಣ್ಣದ (ಲ್ಯೂಸಿಸ್ಟಿಕ್) ಕಡವೆಯೊಂದರ ಚಿತ್ರ ಸೆರೆಯಾಗಿದೆ. ಈ ಬಿಳಿ ಬಣ್ಣದ ಕಡವೆಯು ಹೆಣ್ಣು ಕಡವೆಯಾಗಿದ್ದು, ಇನ್ನೊಂದು ವಯಸ್ಕ ಹೆಣ್ಣು ಕಡವೆಯೊಂದಿಗೆ ಕಂಡುಬಂದಿದೆ. ಆದ್ದರಿಂದ ಇದು ತನ್ನ ತಾಯಿಯೊಂದಿಗಿರುವ ಚಿಕ್ಕ ವಯಸ್ಸಿನ ಕಡವೆ ಎಂದು ಊಹಿಸಲಾಗಿದೆ.

ಈ ಅರಣ್ಯ ಪ್ರದೇಶದಲ್ಲಿ ಇದೇ ಮೊದಲ ಬಾರಿಗೆ ಬಿಳಿ ಬಣ್ಣದ ಕಡವೆಯನ್ನು ಛಾಯಾಚಿತ್ರದ ಮೂಲಕ ದಾಖಲಿಸಲಾಗಿದೆ. ಈ ಹಿಂದೆ 2014 ರಲ್ಲಿ ಬಂಡೀಪುರ ಹುಲಿ ಸಂರಕ್ಷಿತ ಪ್ರದೇಶದಲ್ಲಿ ಬಿಳಿ ಬಣ್ಣದ ಕಡವೆಯೊಂದು ದಾಖಲಾಗಿತ್ತು.

ಲ್ಯೂಸಿಸಮ್ ಎನ್ನುವುದು, ಪ್ರಾಣಿಗಳ ಚರ್ಮದಲ್ಲಿ ವರ್ಣದ್ರವ್ಯದ ಕೊರತೆಯುಂಟಾಗಿ, ಚರ್ಮ ಬಿಳಿ ಅಥವಾ ಮಂದ ಬಣ್ಣಕ್ಕೆ ಬದಲಾಗುವ ವಿರಳ ಪ್ರಕ್ರಿಯೆ. ಇದು ಪ್ರಾಣಿಗಳ ಬೆಳವಣಿಗೆಯಲ್ಲಿನ ದೋಷದಿಂದ ರೂಪುಗೊಂಡ ಫಿನೋಟೈಪ್ (ಪ್ರತಿಯೊಂದು ಜೀವಿಗಳ ಬೆಳವಣಿಗೆಯ ಲಕ್ಷಣ)ನಿಂದಾಗಿ, ಹುಟ್ಟಿನಿಂದಲೇ ಸಹಜವಾಗಿ ಸಂಭವಿಸುವ ಸ್ಥಿತಿಯಾಗಿದೆ. ಇದು ಪ್ರಾಣಿಗಳ ಚರ್ಮದಲ್ಲಿ ಮೆಲನಿನ್ ಕೊರತೆಯಿಂದಾಗಿ ಉಂಟಾಗುವ ಅಲ್ಬಿನಿಸಂಗಿಂತ ಭಿನ್ನವಾಗಿದೆ. ಅಲ್ಬಿನಿಸಂ ಸ್ಥಿತಿಯಲ್ಲಿ ಪ್ರಾಣಿಗಳ ಕಣ್ಣು ಗುಲಾಬಿ ಅಥವಾ ಕೆಂಪು ಬಣ್ಣದಿಂದ ಕೂಡಿರುತ್ತದೆ ಆದರೆ ಲ್ಯೂಸಿಸಂನಲ್ಲಿ ಪ್ರಾಣಿಗಳ ಕಣ್ಣುಗಳು ಸಹಜ ಬಣ್ಣವನ್ನು ಹೊಂದಿರುತ್ತವೆ.

ಇಂತಹ ದತ್ತಾಂಶಗಳು ಈ ಸಸ್ಯಾಹಾರಿ ಪ್ರಾಣಿಗಳ ಜೀವಶಾಸ್ತ್ರದ ಬಗ್ಗೆ ನಮಗೆ ಅನೇಕ ಒಳನೋಟಗಳನ್ನು ನೀಡಬಹುದು ಮತ್ತು ಇದರ ಬಗ್ಗೆ ಹೆಚ್ಚಿನ ಸಂಶೋಧನೆಗೆ ಅವಕಾಶವನ್ನೂ ಮಾಡಿ ಕೊಡುತ್ತದೆ. ಐ.ಯು.ಸಿ.ಏನ್. ಸಂಸ್ಥೆಯ ಕೆಂಪು ಪಟ್ಟಿಯ ಪ್ರಕಾರ ಕಡವೆ ಪ್ರಭೇದವನ್ನು ವಲ್ನರಬಲ್ ವರ್ಗಕ್ಕೆ ಸೇರಿಸಲಾಗಿದೆ, ಅಂದರೆ ಇವುಗಳ ಸಂಖ್ಯೆ ಕ್ಷೀಣಿಸುತ್ತಿರುವ ಸಂಕೇತವಾಗಿದೆ. ಆದ್ದರಿಂದ, ಕಡವೆಗಳಲ್ಲಿ ಇಂತಹ ವಿಶೇಷ ಲಕ್ಷಣಗಳು ಕಂಡುಬಂದಾಗ ಹೆಚ್ಚಿನ ಅಧ್ಯಯನ ಮಾಡುವುದು ಅಗತ್ಯವಾಗಿದೆ. ವಿಶೇಷವೆಂದರೆ, ಇದೇ ಪ್ರದೇಶದಲ್ಲಿ, ಈ ಹಿಂದೆ ಬಿಳಿ ಬಣ್ಣದ ಕೆನ್ನಾಯಿಯನ್ನು ಸಹ ದಾಖಲಿಸಲಾಗಿತ್ತು.

Ads on article

Advertise in articles 1

advertising articles 2

Advertise under the article