
Karnataka Shops Registration : ನೀವು ಅಂಗಡಿ, ವಾಣಿಜ್ಯ ಸಂಸ್ಥೆ ಮಾಲೀಕರಾ? ಕೂಡಲೇ ಕಾರ್ಮಿಕ ಇಲಾಖೆಯಲ್ಲಿ ನೋಂದಣಿ ಮಾಡಿಸಿಕೊಳ್ಳಿ
![]() |
ಸಾಂದರ್ಭಿಕ ಚಿತ್ರ (ಕೃಪೆ- ಪಿಕ್ಸೆಲ್ಸ್) |
ಅಂಗಡಿ ಮಾಲೀಕರು, ವಾಣಿಜ್ಯ ಸಂಸ್ಥೆ ಮಾಲೀಕರು ಗಮನಿಸಬೇಕಾದ ಅಪ್ಡೇಟ್ಸ್ ಒಂದು ಇದೆ. ಅಂಗಡಿ, ವಾಣಿಜ್ಯ ಸಂಸ್ಥೆಗಳಲ್ಲದೆ, ಹೋಟೆಲ್, ರೆಸ್ಟೋರೆಂಟ್, ಬೇಕರಿ, ಕೆಫೆ, ಆಡಳಿತ ಕಚೇರಿ, ದಿನಸಿ ಅಂಗಡಿ ಮಾತ್ರವಲ್ಲದೇ ಕಾರ್ಮಿಕರಿಲ್ಲದ ಏಕವ್ಯಕ್ತಿ ವ್ಯಾಪಾರೋದ್ಯಮಗಳು ಕಾರ್ಮಿಕ ಇಲಾಖೆಯಲ್ಲಿ ನೋಂದಣಿ ಮಾಡಿಸಿಕೊಳ್ಳುವುದು ಕಡ್ಡಾಯ. ಈ ಕುರಿತು ಕಾರ್ಮಿಕ ಇಲಾಖೆ ಸೂಚನೆ ಹೊರಡಿಸಿದೆ.
ಕಾರ್ಮಿಕ ಇಲಾಖೆಯು ಅನುಷ್ಠಾನಗೊಳಿಸಿರುವ ಕರ್ನಾಟಕ ಅಂಗಡಿ ಮತ್ತು ವಾಣಿಜ್ಯ ಸಂಸ್ಥೆಗಳ ಕಾಯ್ದೆ, 1961 ರ ಕಲಂ 4(1) & 3 ಹಾಗೂ ಕರ್ನಾಟಕ ನಿಯಮಗಳು 1963ರ ನಿಯಮ 3 ರನ್ವಯ ಅಂಗಡಿ ಮತ್ತು ವಾಣಿಜ್ಯ ಸಂಸ್ಥೆಗಳಲ್ಲದೆ, ಹೋಟೆಲ್ / ರೆಸ್ಟೋರೆಂಟ್ಸ್, ಬೇಕರಿ, ಕೆಫೆ, ಆಡಳಿತ ಕಚೇರಿ, ದಿನಸಿ ಅಂಗಡಿ ಸೇರಿದಂತೆ ಯಾವುದೇ ಕಾರ್ಮಿಕರನ್ನು ಹೊಂದಿಲ್ಲದಿದ್ದರೂ, ರಾಜ್ಯದ ಎಲ್ಲಾ ಅಂಗಡಿ / ವಾಣಿಜ್ಯ ಸಂಸ್ಥೆಗಳು ಪ್ರಾರಂಭವಾದ ದಿನಾಂಕದಿಂದ 30 ದಿನಗಳೊಳಗೆ ಕಾಯ್ದೆ / ನಿಯಮಾನುಸಾರ ನೋಂದಣಿ ಮಾಡಿಸುವುದು ಕಡ್ಡಾಯಯವಾಗಿರುತ್ತದೆ.
ಅಂಗಡಿ, ಹೋಟೆಲ್, ವ್ಯಾಪಾರೋದ್ಯಮ ನೋಂದಣಿ ಮತ್ತು ಅದರ ಉದ್ದೇಶ
ಈ ನೋಂದಣಿ ಪ್ರಕ್ರಿಯೆಯಿಂದ ಕಾಯ್ದೆ / ನಿಯಮಗಳ ಪಾಲನೆಯಾಗುತ್ತದೆ ಹಾಗೂ ಸದರಿ ಸಂಸ್ಥೆಗಳಲ್ಲಿ ಕೆಲಸ ನಿರ್ವಹಿಸುವ ಕಾರ್ಮಿಕರಿಗೆ ಸೇವಾ ಭದ್ರತೆ ನೀಡುವುದು, ಕಾರ್ಮಿಕರ ಸಂಖ್ಯೆಗೆ ಅನುಗುಣವಾಗಿ ಕಾನೂನು ಬದ್ಧ ಸೌಲಭ್ಯಗಳನ್ನು ಒದಗಿಸಿಕೊಡುವುದು ಈ ಕಾಯ್ದೆಯ ಉದ್ದೇಶವಾಗಿರುತ್ತದೆ. ಆದರೆ ಈವರೆಗೂ ಈ ಕಾಯ್ದೆಯಡಿ ಕಾರ್ಮಿಕ ಇಲಾಖೆಯಲ್ಲಿ ರಾಜ್ಯದ ಸುಮಾರು 3.85 ಲಕ್ಷ ಸಂಸ್ಥೆಗಳು ಮಾತ್ರ ನೋಂದಣಿಯಾಗಿದ್ದು, ಇದು ವಾಸ್ತವವಾಗಿ ಇರುವ ಅಂಗಡಿ ಮತ್ತು ವಾಣಿಜ್ಯ ಸಂಸ್ಥೆಗಳಿಗಿಂತ ತುಂಬಾ ಕಡಿಮೆಯಾಗಿರುತ್ತದೆ. ಹಾಗೂ ಬಹುತೇಕ ಸಂಸ್ಥೆಗಳು ನೋಂದಣಿಯಾಗದೇ ಇರುವುದು ಕಂಡುಬಂದಿರುತ್ತದೆ.
ಅಂಗಡಿ, ಹೋಟೆಲ್, ವ್ಯಾಪಾರೋದ್ಯಮ ನೋಂದಣಿ ಮಾಡಿಸದೇ ಇದ್ದರೆ ಏನು ಕ್ರಮ
ಅಂಗಡಿ ಮತ್ತು ವಾಣಿಜ್ಯ ಸಂಸ್ಥೆಗಳ ನೋಂದಣಿ ಕಾನೂನು ಪ್ರಕಾರ ಕಡ್ಡಾಯವಾಗಿದ್ದು, ನೋಂದಣಿಯಾಗದೆ ಇದ್ದ ಪಕ್ಷದಲ್ಲಿ ನಿಯಮಾನುಸಾರ ಕಾನೂನು ಕ್ರಮ ಕೈಗೊಂಡು ಸಕ್ರಮ ಪ್ರಾಧಿಕಾರದ ನ್ಯಾಯಾಲಯದಲ್ಲಿ ಮೊಕದ್ದಮೆ ದಾಖಲಿಸಲು ಅವಕಾಶವಿರುತ್ತದೆ.
ಅಂಗಡಿ, ಹೋಟೆಲ್, ವ್ಯಾಪಾರೋದ್ಯಮ ನೋಂದಣಿಗೆ ಕೊನೇ ದಿನ ಯಾವಾಗ?
ಎಲ್ಲಾ ಅಂಗಡಿ & ವಾಣಿಜ್ಯ ಸಂಸ್ಥೆಗಳ ಮಲೀಕರು, ಕಾರ್ಮಿಕ ಇಲಾಖೆಯ www.ekarmika.karnataka.gov.in/ekarmika/static/home.aspx ವೆಬ್‍ಸೈಟ್‍ನಲ್ಲಿ ಲಾಗಿನ್ ಆಗಿ ತಮ್ಮ ಸಂಸ್ಥೆಯ ವಿಳಾಸ, ಮಾಲೀಕರ ಹೆಸರು, ವ್ಯಾಪಾರದ ಸ್ವರೂಪ ಮಾಹಿತಿಗಳನ್ನು ನಮೂದಿಸಿ, ಕಾರ್ಮಿಕರ ಸಂಖ್ಯೆಗೆ ಅನುಗುಣವಾಗಿ ಆನ್‍ಲೈನ್ ಶುಲ್ಕವನ್ನು ಪಾವತಿಸಬೇಕು. ಅಗತ್ಯ ದಾಖಲಾತಿಗಳನ್ನು ಆನ್‍ಲೈನ್ ಮುಖೇನ ಸಲ್ಲಿಸಿ ನೋಂದಣಿ ಪತ್ರವನ್ನು ಸಹ ಆನ್‍ಲೈನ್ ಮುಖೇನ ಪಡೆದುಕೊಳ್ಳಬಹುದು. ಈ ನೋಂದಣಿಯು ಮುಂದಿನ 5 ವರ್ಷಗಳವರೆಗೆ ಚಾಲ್ತಿಯಲ್ಲಿರುತ್ತದೆ.
ಅಂಗಡಿ, ಹೋಟೆಲ್, ವ್ಯಾಪಾರೋದ್ಯಮ ನೋಂದಣಿಗೆ ಸಮಸ್ಯೆ ಎದುರಾದರೆ ಏನು ಮಾಡಬೇಕು
ನೋಂದಣಿ ಮಾಡುವ ಪ್ರಕ್ರಿಯೆಯಲ್ಲಿ ಯಾವುದೇ ವ್ಯತ್ಯಾಸ / ಸಮಸ್ಯೆ ಕಂಡುಬಂದಲ್ಲಿ ಇಲಾಖೆಯ ಸಹಾಯವಾಣಿ 080-29753059 ಅಥವಾ 155214 ಹಾಗೂ ಇ-ಮೇಲ್ ekarmikalabour@gmail.com ಮತ್ತು ಕಾರ್ಮಿಕ ಇಲಾಖೆಯ ಅಧಿಕೃತ ಜಾಲತಾಣ karmikaspandana.karnataka.gov.in ವೆಬ್‍ಸೈಟ್‍ನಲ್ಲಿ ಕ್ಷೇತ್ರವಾರು, ಅಧಿಕಾರಿ / ಕಾರ್ಮಿಕ ನಿರೀಕ್ಷಕರ ಹೆಸರು, ದೂರವಾಣಿ ಸಂಖ್ಯೆ ವಿವರಗಳನ್ನು ಪ್ರಕಟಿಸಿದ್ದು, ಇವರುಗಳ ಸಹಾಯವನ್ನು ಪಡೆದು ಅಂಗಡಿ ಮತ್ತು ವಾಣಿಜ್ಯ ಸಂಸ್ಥೆಗಳನ್ವಯ ನೋಂದಣಿಯನ್ನು ಮಾಡಿಸಬಹುದಾಗಿರುತ್ತದೆ ಎಂದು ಇಲಾಖೆ ತಿಳಿಸಿದೆ.