ಪುತ್ತೂರು ಶ್ರೀ ಮಹಾಲಿಂಗೇಶ್ವರ ದೇವರ ಅವಭೃಥ ಸ್ಥಳದ 10 ಸೆಂಟ್ಸ್ ದೇವರ ಹೆಸರಿಗೆ ವರ್ಗ
ಪುತ್ತೂರು ಶ್ರೀ ಮಹಾಲಿಂಗೇಶ್ವರ ದೇವರ ಅವಭೃಥ ಸ್ಥಳದ 10 ಸೆಂಟ್ಸ್ ದೇವರ ಹೆಸರಿಗೆ ವರ್ಗ
ಪುತ್ತೂರು ಶ್ರೀ ಮಹಾಲಿಂಗೇಶ್ವರ ದೇವರ ಅವಭೃಥ ಸ್ಥಳವಾದ ವೀರಮಂಗಲದಲ್ಲಿ ಕುಮಾರಧಾರ ನದಿ ತಟದ ನಿವಾಸಿ ಖಾಸಿಂ ಸ್ವಾಧೀನ ಇದ್ದ 10 ಸೆಂಟ್ಸ್ ಜಮೀನನ್ನು ದೇವಸ್ಥಾನಕ್ಕೆ ಬಿಟ್ಟುಕೊಟ್ಟಿದ್ದಾರೆ. ಇದೇ ಸ್ಥಳದಲ್ಲಿ ಶ್ರೀ ಮಹಾಲಿಂಗೇಶ್ವರ ದೇವರ ಕಟ್ಟೆ ಇದ್ದು, ಈಗ ಆ 10 ಸೆಂಟ್ಸ್ ಜಾಗವನ್ನು ಪುತ್ತೂರು ಶ್ರೀ ಮಹಾಲಿಂಗೇಶ್ವರ ದೇವರ ಅವಭೃಥ ಸ್ನಾನದ ಕಟ್ಟೆ ಎಂಬ ಹೆಸರಿಗೆ ಪಹಣಿ ಮಾಡಲಾಗಿದೆ.
ಶ್ರೀ ಕ್ಷೇತ್ರದ ಭಕ್ತ ದಿನೇಶ್ ಕುಮಾರ್ ಜೈನ್ ಈ ವಿಷಯವನ್ನು ಸುದ್ದಿಗೋಷ್ಠಿಯಲ್ಲಿ ತಿಳಿಸಿದರು. ಪುತ್ತೂರು ಶ್ರೀ ಮಹಾಲಿಂಗೇಶ್ವರ ದೇವರು ಸುಮಾರು 800 ವರ್ಷಗಳಿಂದ ಅವಭೃಥ ಸ್ನಾನಕ್ಕೆಂದು ವೀರಮಂಗಲದಲ್ಲಿ ಕುಮಾರಧಾರ ನದಿಗೆ ಹೋಗುವುದು ವಾಡಿಕೆ. ಆಗ ಅಲ್ಲಿರುವ ಅಶ್ವತ್ಥಕಟ್ಟೆಗೆ ದೇವರು ಆಗಮಿಸಿ ಪೂಜೆ ಸ್ವೀಕರಿಸಿದ ಬಳಿಕ ಅವಭೃಥ ಸ್ನಾನಕ್ಕೆ ಹೋಗುವುದು ರೂಢಿಗತ ಸಂಪ್ರದಾಯ.
ಸದರಿ ಜಾಗ 22 ವರ್ಷಗಳ ಹಿಂದೆ ಖಾಸಿಂ ಅವರ ಅಧೀನಕ್ಕೆ ಒಳಪಟ್ಟಿತ್ತು. ದೇವಸ್ಥಾನದ ಆಗಿನ ಆಡಳಿತ ಮೊಕ್ತೇಸರ ಎನ್ ಕೆ ಜಗನ್ನಿವಾಸ ರಾವ್ ಆಡಳಿತ ಸಮಿತಿ ಸದಸ್ಯ ಪಿ. ಮಾಧವ, ಅಂದಿನ ಕಾರ್ಯನಿರ್ವಹಣಾಧಿಕಾರಿ ಉಮಾಕಾಂತ ಅವರು ಸ್ಥಳಕ್ಕೆ ತೆರಳಿ ದೇವರ ಅಶ್ವತ್ಥ ಕಟ್ಟೆ ಇರುವ 10 ಸೆಂಟ್ಸ್ ಜಾಗಕ್ಕೆ ಹಾಕಿದ್ದ ಬೇಲಿಯನ್ನು ತೆರವುಗೊಳಿಸಿದರು. ಇದೀಗ ಆ ಸ್ಥಳ ದೇವರ ಹೆಸರಿಗೆ ವರ್ಗಾವಣೆ ಆಗಿದೆ.
ಖಾಸಿಂ ಅವರ ಸುಪರ್ದಿಗೆ ಜಾಗ ಹೋಗುವ ಮೊದಲು ಅವರ ಪೂರ್ವಜರ ಬಳಿ ಇತ್ತು. ಅವರಿಗೂ ಮೊದಲು ಭಾಗೀರಥಿ ಕುಟುಂಬದ ಅಧೀನ ಈ ಜಾಗ ಇತ್ತು. ಆಗಲೇ 10 ಸೆಂಟ್ಸ್ ಜಾಗ ದೇವರಿಗೆ ಸೇರಿದ್ದು ಎಂಬ ಉಲ್ಲೇಖ ಮಾಡಲಾಗಿತ್ತು. 1942ರ ಸಬ್‌ರಿಜಿಸ್ಟ್ರಾರ್ ದಸ್ತಾವೇಜುಗಳಲ್ಲಿ ಈ ವಿಚಾರ ದಾಖಲೆಯಾಗಿದೆ. ಆದರೆ ಸರ್ಕಾರಿ ದಾಖಲೆಗಳಲ್ಲಿ ಆದ ಲೋಪದೋಷದಿಂದಾಗಿ 86 ಸೆಂಟ್ಸ್ ಎಂದು ನಮೂದಾಗಬೇಕಾಗಿದ್ದ ಜಾಗ 96 ಸೆಂಟ್ಸ್ ಎಂದು ನಮೂದಾಗಿತ್ತು.
ಅದಾಗಿ ಸುಮಾರು 48 ವರ್ಷಗಳಿಂದ ಖಾಸಿಂ ಕುಟುಂಬದ ವಶದಲ್ಲಿದ್ದ 10 ಸೆಂಟ್ಸ್ ಜಾಗ ಈಗ ದೇವರ ಹೆಸರಿಗೆ ವರ್ಗಾವಣೆ ಆಗಿದ್ದು, ಈ ಸಲದ ಜಾತ್ರೆಯ ಸಂದರ್ಭದಲ್ಲಿ ದೇವರಿಗೆ ಸಮರ್ಪಣೆಯಾಗಲಿದೆ ಎಂದು ದಿನೇಶ್ ಕುಮಾರ್ ತಿಳಿಸಿದ್ದಾರೆ.