ಶಿಕ್ಷಕರು ಅರ್ಜಿ ಹಾಕಿ ಉತ್ತಮ ಶಿಕ್ಷಕ ಪ್ರಶಸ್ತಿ ಪಡೆಯಬೇಕಾ?; ಕರ್ನಾಟಕ ವಿಧಾನ ಪರಿಷತ್ ಸಭಾಪತಿ ಬಸವರಾಜ ಹೊರಟ್ಟಿ ಅವರ ವಿಶೇಷ ಲೇಖನ

ಶಿಕ್ಷಕರು ಅರ್ಜಿ ಹಾಕಿ ಉತ್ತಮ ಶಿಕ್ಷಕ ಪ್ರಶಸ್ತಿ ಪಡೆಯಬೇಕಾ?; ಕರ್ನಾಟಕ ವಿಧಾನ ಪರಿಷತ್ ಸಭಾಪತಿ ಬಸವರಾಜ ಹೊರಟ್ಟಿ ಅವರ ವಿಶೇಷ ಲೇಖನ




ಶಿಕ್ಷಕರು ಅರ್ಜಿ ಹಾಕಿ ಉತ್ತಮ ಶಿಕ್ಷಕ ಪ್ರಶಸ್ತಿ ಪಡೆಯಬೇಕಾ ಎಂಬ ವಿಷಯ ನನ್ನನ್ನು ಹಲವು ದಶಕಗಳಿಂದ ಇದು ಸರಿನಾ ಎಂದು ಕಾಡುತ್ತಿದೆ ? ಈ ಸಂಗತಿ ಕುರಿತು ನನ್ನ ಹಲವು ಮನದಾಳದ ಮಾತುಗಳನ್ನು ಹೇಳಬೇಕೆನಿಸುತ್ತಿದೆ. ನಾಲ್ಕು ದಶಕಗಳಿಂದ ಶಿಕ್ಷಣ ಕ್ಷೇತ್ರದಲ್ಲಿ ನಾನು ಇದ್ದರೂ ಈ ಸಮಸ್ಯೆಗೆ ಪರಿಹಾರ ಕಂಡುಕೊಳ್ಳಲು ಆಗಲಿಲ್ಲವೆಂಬ ಕೊರಗು ಸಹ ನನಗಿದೆ.

 ಈ ವಿಷಯವಾಗಿ ನಾನು ಶಿಕ್ಷಣ ಸಚಿವನಾಗಿದ್ದಾಗ ಸಾಕಷ್ಟು ಪ್ರಾಮಾಣಿಕ ಪ್ರಯತ್ನ ಮಡಿದ್ದೆ ಅದು ಸಾಧ್ಯವಾಗಲಿಲ್ಲ.
 ಸಾಕಷ್ಟು ಮೆರಿಟ್ ಇರತಕ್ಕಂತಹ ಶಿಕ್ಷಕರನ್ನು ಆಯ್ಕೆ ಮಾಡಲು ವಿಶ್ವವಿದ್ಯಾಲಯದ ನಿವೃತ್ತ ಕುಲಪತಿಗಳ ನೇತೃತ್ವದಲ್ಲಿ ತಜ್ಞರ ಸಮಿತಿ ರಚಿಸಿ ಆಯ್ಕೆ ಕುರಿತು ಮಾನದಂಡಗಳನ್ನು ರಚಿಸಲು ಟಿಪ್ಪಣಿ ಸಹ ಹೊರಡಿಸಿದ್ದನ್ನು ಇಲ್ಲಿ ನೆನಪಿಸಿಕೊಳ್ಳುತ್ತೇನೆ. ಆ ಕೆಲಸ ಪೂರ್ಣಗೊಳ್ಳದೇ ಇರುವುದು ನನ್ನನ್ನು ಇನ್ನೂ ಕಾಡುತ್ತಿದೆ. ಈಗಂತೂ ಪ್ರಸ್ತುತ ಪದ್ಧತಿಯಿಂದ ಸಾಕಷ್ಟು ಅವಾಂತರಗಳು, ಟೀಕೆ ಟಿಪ್ಪಣಿಗಳು, ಪ್ರಶಸ್ತಿಯ ಮೌಲ್ಯ, ಮಹತ್ವ ಕುರಿತು ಸಾಕಷ್ಟು ಚರ್ಚೆಯಾಗುತ್ತಿರುವುದು ಸಹ ವಿμÁದದ ಸಂಗತಿ.

ಪ್ರಶಸ್ತಿಯ ಮಾನ ದಂಡವೇನು?

ಶಿಕ್ಷಕನೆಂದರೆ ಶಿವಸ್ವರೂಪಿ, ಕ್ಷಮಾವಂತ ಜೊತೆಗೆ ಮಕ್ಕಳ ಮನದಲ್ಲಿ ಕಲಿಕೆಯನ್ನು ಬಿತ್ತಿ ಅವರ ಬಾಳಿನಲ್ಲಿ ಬೆಳಕು ಮೂಡಿಸುವವನು ಎಂದು ಅರ್ಥ. ಶಿಕ್ಷಕನಿಗೆ ಇನ್ನೊಂದು ಹೆಸರೂ ಇದೆ ಗುರು ಎಂದು. ಗುರು ಎನ್ನುವ ಪದದಲ್ಲಿ ಗು-ಎಂದರೆ ಕತ್ತಲೆ, ಅಜ್ಞಾನ. ರು-ಎಂದರೆ ಕತ್ತಲೆ ಕಳೆದು ಅಜ್ಞಾನವನ್ನು ಹೊಡೆದೋಡಿಸಿ ವಿದ್ಯಾರ್ಥಿಯ ಬದುಕಿನಲ್ಲಿ ಬೆಳಕನ್ನು ಮೂಡಿಸುವವನೆ ಗುರು. ಅದಕ್ಕಾಗಿಯೆ ನಮ್ಮ ಹಿರಿಯರು "ಗುರು ಬ್ರಹ್ಮ, ಗುರು ವಿಷ್ಣು, ಗುರು ದೇವೋ ಮಹೇಶ್ವರ, ಗುರು ಸಾಕ್ಷಾತ್ ಪರಬ್ರಹ್ಮ ತಸ್ಮೈ ಶ್ರೀ ಗುರುವೇ ನಮಃ" ಎಂದು ಹೇಳಿರುವುದು. ಗುರುವಾದವನಿಗೆ ಯಾವಾಗಲೂ ತನ್ನ ಶಿಷ್ಯನ ಉದ್ಧಾರದ ಚಿಂತೆ ಇದ್ದೇ ಇರುತ್ತದೆ. ಶಿಷ್ಯ ತನ್ನನ್ನೂ ಮೀರಿ ಬೆಳೆದಾಗಲೆ ಗುರುವಿಗೆ ಸಮಾಧಾನ ಮತ್ತು ಸಂತೋಷವಾಗುತ್ತದೆ.
ಇಂತಹ ಗುರುವಿಗೆ ಪ್ರತಿ ವರ್ಷದ ಶಿಕ್ಷಕ ದಿನಾಚರಣೆಯ ಹಿನ್ನೆಲೆಯಲ್ಲಿ ಉತ್ತಮ ಶಿಕ್ಷಕ ಪ್ರಶಸ್ತಿಯನ್ನು ರಾಷ್ಟ್ರ ಮಟ್ಟದಿಂದ ಹಿಡಿದು, ತಾಲೂಕಾ ಮಟ್ಟದವರೆಗೂ ನೀಡಿ ಗೌರವಿಸಲಾಗುತ್ತಿದೆ. ಆದರೆ ಪ್ರಶಸ್ತಿ ನೀಡುವ ಮಾನದಂಡಗಳ ಬಗ್ಗೆ ಯೋಚಿಸಬೇಕಿದೆ.

ಏಕೆಂದರೆ ತಾನೊಬ್ಬ ಉತ್ತಮ ಶಿಕ್ಷಕನೆಂದು ತಾನೇ ಅರ್ಜಿ ಹಾಕಿ ಪ್ರಶಸ್ತಿ ಪಡೆಯಬೇಕಾದ ಅನಿವಾರ್ಯತೆ ಪದ್ಧತಿ ಶಿಕ್ಷಣ ಕ್ಷೇತ್ರದಲ್ಲಿ ಹಲವು ದಿನಗಳಿಂದ ಇರುವುದು ಬಹಳಷ್ಟು ಬೇಸರದ ಸಂಗತಿಯಾಗಿದೆ. ಈ ಪದ್ಧತಿ ಇಂದು ಸಾಕಷ್ಟು ಚರ್ಚೆಗೆ ಕಾರಣವಾಗಿದೆ.

ಇಲ್ಲಿ ಒಂದು ಪ್ರಶ್ನೆ ಎದಿರಾಗುತ್ತದೆ. ಉತ್ತಮ ಪ್ರಶಸ್ತಿ ಪಡೆದವರು ಮಾತ್ರ ಉತ್ತಮ ಶಿಕ್ಷಕರು ಉಳಿದವರಾರೂ ಉತ್ತಮ ಶಿಕ್ಷಕರಲ್ಲವೆ? ಅಂಥವರು ತಾವಾಯಿತು, ತಮ್ಮ ಕೆಲಸವಾಯಿತು ಎಂದು ಸುಮ್ಮನೆ ಇರುವ ಶಿಕ್ಷಕರೆ ಹೆಚ್ಚು. ಅವರು ಯಾವ ಅರ್ಜಿಯನ್ನೂ ಹಾಕುವ ಗೋಜಿಗೆ ಹೋಗುವುದಿಲ್ಲ. ಹಾಗೆಂದು ಅವರು ಉತ್ತಮರಲ್ಲವೆ? ಎಂಬ ಪ್ರಶ್ನೆ ಸಹಜವಾಗಿ ಮೂಡುತ್ತದೆ.ಪ್ರಶಸ್ತಿಗೆ ಅರ್ಜಿ ಹಾಕುವ ಮಾನದಂಡವನ್ನು ನಿರ್ಧರಿಸಿರುವ ಸರಕಾರ ಅದೆಷ್ಟು ಸಮರ್ಪಕವಾಗಿ ಅರ್ಜಿಗಳನ್ನು ವಿಲೆವಾರಿ ಮಾಡುತ್ತದೆ? ಅರ್ಜಿ ಹಾಕಿದ ಶಿಕ್ಷಕರ ಶಾಲೆಗೆ ಭೇಟಿ ನೀಡಿ ಅವರು ಅರ್ಹರೋ ಅಲ್ಲವೋ ಎಂಬುದನ್ನು ಗಮನಿಸಿದ್ದಾರೆ? ಅರ್ಜಿ ಬಂತು, ಮೇಲಿಂದ ದೂರವಾಣಿ ಕರೆ ಬಂತು ಎಂದು ಪ್ರಶಸ್ತಿ ನೀಡಿದ ಉದಾಹರಣೆಗಳನ್ನು ನಾವು ಸಾಕಷ್ಟು ಕಂಡಿದ್ದೇವೆ; ಕಾಣುತ್ತಿದ್ದೇವೆ. ಬಹಳಷ್ಟು ಸಾರೆ ಪ್ರಶಸ್ತಿಯ ಮಾನ ದಂಡವೇನು? ಎಂದು ಯೋಚಿಸಿದರೆ ಮಾನವೇ ದಂಡ ಎನ್ನುವ ಉತ್ತರ ಸಿಗುತ್ತದೆ.

ಶಿಕ್ಷಕರೆಂದರೆ ಸ್ವಾಭಿಮಾನಿಗಳು. ತಮ್ಮ ಗೌರವಕ್ಕೆ ಚ್ಯುತಿ ಬರುತ್ತದೆ ಎಂದರೆ ಅವರು ಯಾರ ಮುಂದೂ ಪ್ರಶಸ್ತಿಗಾಗಿ ಕೈ ಚಾಚುವವರಲ್ಲ. ಯಾಕೆಂದರೆ ಮಕ್ಕಳಲ್ಲಿ ಸ್ವಾಭಿಮಾನ, ಕೆಚ್ಚು ಮತ್ತು ಪ್ರಾಮಾಣಿಕೆತಯ ಗುಣಗಳನ್ನು ಕಲಿಸುವವರೆ ಶಿಕ್ಷಕರು. ಹೀಗಾಗಿ ಸರಕಾರ ಅರ್ಜಿ ಕರೆದ ಮಾತ್ರಕ್ಕೆ ಎಲ್ಲ ಶಿಕ್ಷಕರೂ ಅರ್ಜಿ ಹಾಕುತ್ತಾರೆ ಎಂಬುದನ್ನು ನಿರೀಕ್ಷಿಸುವುದು ತಪ್ಪು. ಅರ್ಜಿ ಹಾಕುವ ಸಮಯ ಬಂದಾಗ ನಮಗ್ಯಾಕೆ ಈ ಉಸಾಬರಿ ಎಂಬುದು ನಿಜಕ್ಕೂ ಉತ್ತಮ ಶಿಕ್ಷಕರ ಅನಿಸಿಕೆಯಾಗಿದೆ. ಆದ್ದರಿಂದಲೆ ಪ್ರಶಸ್ತಿಗಾಗಿ ಅರ್ಜಿ ಹಾಕುವವರ ಸಂಖ್ಯೆ ತೀರಾ ವಿರಳವಾಗಿದೆ. ಅರ್ಜಿಗಳು ನಿರೀಕ್ಷಿತ ಮಟ್ಟದಲ್ಲಿ ಬಾರದೆ ಇದ್ದಾಗ ಇದ್ದವರಲ್ಲಿಯೇ ಆಯ್ಕೆ ಮಾಡುತ್ತಾರೆ. ತಮಗೆ ಉತ್ತಮ ಎನಿಸುವ ವ್ಯಕ್ತಿಗೆ ಪ್ರಶಸ್ತಿ ಕೊಟ್ಟು ಕೈತೊಳೆದುಕೊಂಡು ಮತ್ತೆ ಮುಂದಿನ ವರ್ಷದ ಪ್ರಕ್ರಿಯೆಗಾಗಿ ಕಾಯುತ್ತಾರೆ. ಇದರಿಂದ ಉತ್ತಮ ಶಿಕ್ಷಕ ಪ್ರಶಸ್ತಿಯು ತನ್ನ ಗೌರವ, ಘನತೆಗಳನ್ನು ಕಳೆದುಕೊಳ್ಳುತ್ತಿದೆಯೇ ? ಎಂದು ಯೋಚಿಸಬೇಕಾಗಿದೆ.

ಅರ್ಜಿ ಆಹ್ವಾನಿಸಿ ಪ್ರಶಸ್ತಿ ನೀಡುವ ಕ್ರಮವನ್ನು ಬಿಡಬಾರದೇಕೆ

ಶಿಕ್ಷಣ ಇಲಾಖೆ ಅರ್ಜಿಗಳನ್ನು ಆಹ್ವಾನಿಸಿ ಪ್ರಶಸ್ತಿ ನೀಡುವ ಕ್ರಮವನ್ನು ಕೈ ಬಿಡಬೇಕು. ಸೆಪ್ಟಂಬರ್ ತಿಂಗಳಿಗೆ ಎರಡು ಮೂರು ತಿಂಗಳ ಮುಂಚೆ ಶಾಲೆಗಳಿಗೆ ಭೇಟಿ ನೀಡಿ ಅಲ್ಲಿ ಯಾರು ಸಮರ್ಪಕ ಕಾರ್ಯ ನಿರ್ವಹಿಸುತ್ತಾರೆ, ಶಾಲಾ ಮಕ್ಕಳೊಂದಿಗೆ ಅವರು ಹೇಗೆ ನಡೆದುಕೊಳ್ಳುತ್ತಾರೆ, ಅವರ ಚರಿತ್ರೆ ಮತ್ತು ಚಾರಿತ್ರ್ಯ ಎನು? ಪಾಠದ ಜೊತೆಗೆ ಅವರು ಪಾಠೋಪಕರಣಗಳನ್ನು ಬಳಸಿ ಪಾಠ ಮಾಡುತ್ತಾರೆಯೋ, ಪ್ರಯೋಗಗಳನ್ನು ಮಾಡಿಸುವ ಮೂಲಕ ಬೋಧನೆ ಮಾಡುತ್ತಾರೆಯೋ, ವಿದ್ಯಾರ್ಥಿಗಳ ಪಾಲಕರೊಂದಿಗೆ ಅವರ ಸಂಬಂಧ ಹೇಗಿದೆ, ಸಮಾಜದಲ್ಲಿನ ಸಮುದಾಯದೊಂದಿಗೆ ಅವರ ಒಡನಾಟ ಹೇಗಿದೆ, ಅವರ ವಿಷಯದಲ್ಲಿ ಐದು ವರ್ಷಗಳ ಹಿಂದಿನ ಫಲಿತಾಂಶದ ಸಾಧನೆ ಏನು? ಎಂಬಿತ್ಯಾದಿ ವಿಷಯಗಳ ಪಟ್ಟಿ ಮಾಡಿಕೊಂಡು ಸಮೀಕ್ಷೆ ಮಾಡಿ ತಾವೇ ಸ್ವತಃ ಗುರುತಿಸಿ ಪ್ರಶಸ್ತಿ ನೀಡಿದರೆ ಪ್ರಶಸ್ತಿಗೊಂದು ಗೌರವ ಸಿಗುತ್ತದೆ. ಘನತೆ ಬರುತ್ತದೆ. ಎಂಬ ಭಾವನೆ ನನ್ನದು. ಈಗ ಯಾರಾದರೂ ನನಗೆ ಉತ್ತಮ ಶಿಕ್ಷಕ ಪ್ರಶಸ್ತಿ ಬಂದಿದೆ ಎಂದು ಹೇಳಿದರೆ ಅವರನ್ನು ಅನುಮಾನದಿಂದ ನೋಡುವಂತಾಗಿದೆ. ಇದಕ್ಕೆ ಅರ್ಹ ಶಿಕ್ಷಕರೂ ಹೊರತಾಗಿಲ್ಲ. ಎಂಬಿತ್ಯಾದಿ ಪ್ರಶ್ನೆಗಳನ್ನು ಕೇಳಿ ಪ್ರಶಸ್ತಿ ಪುರಸ್ಕøತರಿಗೆ ಮುಜುಗುರವನ್ನುಂಟು ಮಾಡುವದನ್ನೂ ನಾವು ಕಂಡಿದ್ದೇವೆ. ಇವರು ಉತ್ತಮ ಪ್ರಶಸ್ತಿ ಪುರಸ್ಕೃತರಾದರೆ ಸಾಕೆ? ಮಕ್ಕಳಿಂದ ಉತ್ತಮ ಶಿಕ್ಷಕ ಎನ್ನಿಸಿಕೊಳ್ಳುವು ಯಾವಾಗ ಎಂಬ ಪ್ರಶ್ನೆಯೂ ಮೂಡುತ್ತದೆ.

ಕೆಲವು ಸಂದರ್ಭಗಳಲ್ಲಿ ದಂಪತಿಗಳಿಬ್ಬರೂ ಶಿಕ್ಷಕರಾಗಿದ್ದರೆ, ತನಗೂ, ತನ್ನ ಹೆಂಡತಿಗೂ ಒಂದೊಂದು ಪ್ರಶಸ್ತಿ ನೀಡಿ ಎಂದು ಅಧಿಕಾರಿಗಳ, ರಾಜಕಾರಣಿಗಳ ದುಂಬಾಲು ಬಿದ್ದವರಿಗೇನೂ ಕೊರೆತೆಯಿಲ್ಲ. ಅಂಥವರು ಅಧಿಕಾರಿಗಳ, ರಾಜಕಾರಣಿಗಳ ಮರ್ಜಿ ಪಡೆದುಕೊಂಡು ಪ್ರಶಸ್ತಿ ಪಡೆದ ಉದಾಹರಣೆಗಳು ಇತ್ತೀಚೆಗೆ ಹೆಚ್ಚಾಗುತ್ತಿದೆ ಎಂಬ ನೋವು ಸಹ ನನಗಿದೆ. ಈಗಲಾದರೂ ಶಿಕ್ಷಣ ಇಲಾಖೆ ಅರ್ಜಿ ಹಾಕಿಸಿಕೊಂಡು ಪ್ರಶಸ್ತಿ ನೀಡುವ ಕ್ರಮವನ್ನು ಕೈ ಬಿಡಬೇಕು.

ಶಿಕ್ಷಣ ಇಲಾಖೆಯಲ್ಲಿ ಇರುವ ಪ್ರಾಮಾಣಿಕ, ಪಾರದರ್ಶಕ ಅಧಿಕಾರಿಗಳನ್ನು, ಇಲ್ಲವೆ ನಿವೃತ್ತರಾದ ಮುಖ್ಯೋಪಾಧ್ಯಾಯರುಗಳನ್ನು ಬಳಸಿಕೊಂಡು ಜಿಲ್ಲೆಯಲ್ಲಿನ, ತಾಲೂಕದಲ್ಲಿರುವ ಶಾಲೆಗಳಿಗೆ ಕಳುಹಿಸಿ ಸಮೀಕ್ಷೆ ಮಾಡಿಕೊಂಡು ಬರಲು ತಿಳಿಸಬೇಕು. ಈ ಕಾರ್ಯ ಪ್ರತಿ ವರ್ಷದ ಜೂನ್ ತಿಂಗಳಿನಿಂದ ಪ್ರಾರಂಭವಾಗಿ ಆಗಸ್ಟ್ 15ರೊಳಗೆ ಮುಗಿಸಬೇಕು. ನಂತರ ತಾವು ತಂದ ಮಾಹಿತಿಗಳನ್ನು ಕಲೆ ಹಾಕಿ ಅದಕ್ಕೆಂದೆ ಇರುವ ಆಯ್ಕೆ ಸಮಿತಿ ಮುಂದೆ ಇರಿಸಿ ಸೂಕ್ತ ತೀರ್ಮಾನವನ್ನು ತೆಗೆದುಕೊಂಡು ಪ್ರಶಸ್ತಿ ನೀಡಿದರೆ ಅರ್ಹರಿಗೆ ಪ್ರಶಸ್ತಿ ದೊರೆತು ಆ ಪ್ರಶಸ್ತಿಗೊಂದು ಗೌರವ, ಘನತೆ ತಾನೇ ತಾನಾಗಿ ಬರುತ್ತದೆ. ಇಲ್ಲವಾದರೆ ಅಂತೂ ನೀನೂ ಪ್ರಶಸ್ತಿಯನ್ನು ಪಡೆದೆಯಾ ಎನ್ನುವ ಬದಲು ಹೊಡೆದುಕೊಂಡೆಯಾ? ಎಂಬ ಮಾತೆ ಎಲ್ಲೆಡೆ ಕೇಳಬರುತ್ತದೆ. ಎಷ್ಟೋ ಶಿಕ್ಷಕರು ಅರ್ಜಿ ಹಾಕದೇ ಪ್ರಶಸ್ತಿ ಪಡೆದುಕೊಂಡಿದ್ದು ಉಂಟು. ಇನ್ನಾದರೂ ಶಿಕ್ಷಣ ಇಲಾಖೆ ನನ್ನ ಕೆಲ ಚಿಂತನೆಗಳನ್ನು ವಿಚಾರಗಳನ್ನು ಆಲಿಸಿ ಅರ್ಹರಿಗೆ ಪ್ರಶಸ್ತಿ ನೀಡಲು ಮುಂದಾಗಬೇಕು ಇದರಿಂದಾಗಿ ಕನಿಷ್ಠ ಶೇಕಡ 70 ರಿಂದ ಶೇಕಡ 80 ರಷ್ಟಾದರೂ ಪಾರದರ್ಶಕ ಆಯ್ಕೆಯಿಂದ ಹೆಚ್ಚೆಚ್ಚು ಉತ್ತಮ ಶಿಕ್ಷಕರ ಆಯ್ಕೆ ಆಗಬಹುದು ಎಂಬ ಅನಿಸಿಕೆ ಸಹ ನನ್ನದು.


- ಬಸವರಾಜ ಹೊರಟ್ಟಿ
ಸಭಾಪತಿಗಳು ಕರ್ನಾಟಕ
ವಿಧಾನಪರಿಷತ್ತು ಬೆಂಗಳೂರು

Ads on article

Advertise in articles 1

advertising articles 2

Advertise under the article